ಕಾಣಿಯೂರು ವ್ಯಾಪಾರಿಗಳ ಮೇಲಿನ ಹಲ್ಲೆ ಪ್ರಕರಣ
ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಬೆಡ್ ಶೀಟ್ ವ್ಯಾಪಾರಿಗಳ ಮೇಲೆ ಕಾಣಿಯೂರಿನಲ್ಲಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಪ್ರಕರಣವನ್ನು ಸಿಓಡಿಗೆ ಒಪ್ಪಿಸಬೇಕು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ.

ಬೆಡ್ ಶೀಟ್ ವ್ಯಾಪಾರಿಗಳು ಮಹಿಳೆಯ ಮಾನಭಂಗಕ್ಕೆ ಯತ್ನಿ ಮಾಡಿದ್ದರೆ ಅವರ ವಿರುದ್ದ ಪ್ರಕರಣ ದಾಖಲಿಸಲಿ. ಯುವಕರು ಯಾವುದೇ ತಪ್ಪು ಮಾಡದೇ ಅವರ ಮೇಲೆ ಹಲ್ಲೆ ನಡೆದಿದೆ ಎಂದರೆ ರಾಜ್ಯದಲ್ಲಿ ಅಥವಾ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪ್ರತೀಯೊಬ್ಬರೂ ಚಿಂತಿಸಬೇಕಾದ ವಿಚಾರವಾಗಿದೆ. ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಗುಂಪು ಹಲ್ಲೆಗಳು ಕಾಣಿಯೂರಿಗೆ ಬಂದಿದೆ ಅಂದರೆ ಇದರ ಹಿಂದೆ ಚುನಾವಣಾ ಅಜೆಂಡಾ ಇದೆ ಎಂಬುದು ಖಾತ್ರಿಯಾಗಿದೆ.
ಚುನವಣೆ ಹತ್ತಿರವಾಗುತ್ತಿದ್ದಂತೆಯೇ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಲೇ ಬರುತ್ತಿದ್ದು ನೈತಿಕ ಪೊಲೀಸರ ಹೆಡೆಮುರಿ ಕಟ್ಟುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ. ಇದೇ ರೀತಿಯ ಹಲ್ಲೆಗಳು ಪ್ರತೀಯೊಂದು ಕಡೆಯೂ ಮುಂದುವರೆದರೆ ಜಿಲ್ಲೆಯ ಪರಿಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿರುವ ಅವರು ಪ್ರಕರಣವನ್ನು ಸಿಒಡಿಗೆ ಒಪ್ಪಿಸಿ ತನಿಖೆ ನಡೆಸಿ ತಪ್ಪಿತಸ್ಥರೂ ಯಾರೇ ಆದರೂ ಮುಲಾಜಿಲ್ಲದೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.