ಕರಾವಳಿಕ್ರೈಂ

ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ, ಆರೋಪಿಯ ಮನೆ, ಕೊಟ್ಟಿಗೆ ಜಪ್ತಿ


ಬಂಟ್ವಾಳ: ತಾಲೂಕಿನ ಸಜೀಪ ಮೂಡಾ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದು, ಕೃತ್ಯ ನಡೆದ ಸ್ಥಳ, ಆರೋಪಿಯ ಮನೆ ಹಾಗೂ ದನದ ಕೊಟ್ಟಿಗೆಯನ್ನು ಜಪ್ತಿ ಮಾಡಿದ್ದಾರೆ.


ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪ ಮೂಡಾ ಗ್ರಾಮದ ಕೊಳಕೆ ಪಂಜಾಜೆ ಎಂಬಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 68/2026 ರಂತೆ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ ರ ಕಲಂ 4, 7, 12 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

 


ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಕೃತ್ಯ ನಡೆದ ಸ್ಥಳವಾದ ಕೊಳಕೆ ಪಂಜಾಜೆಯ ಆರೋಪಿ ಮುಸ್ತಫಾ ಎಂಬಾತನಿಗೆ ಸೇರಿದ ಮನೆ ಹಾಗೂ ದನದ ಕೊಟ್ಟಿಗೆಗಳನ್ನು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020’ ರ ಕಲಂ: 8(1) ರ ಅನ್ವಯ ಅಧಿಕೃತವಾಗಿ ಜಪ್ತಿ (ಸೀಜ್) ಮಾಡಿದ್ದಾರೆ.
ಸ್ಥಳ ಮಹಜರು ಹಾಗೂ ಜಪ್ತಿ ಪ್ರಕ್ರಿಯೆಗಳನ್ನು ಮುಗಿಸಿರುವ ಬಂಟ್ವಾಳ ನಗರ ಪೊಲೀಸರು, ಮುಂದಿನ ಕಾನೂನು ಕ್ರಮಗಳಿಗಾಗಿ ಮಂಗಳೂರು ಉಪವಿಭಾಗದ ಮಾನ್ಯ ಉಪ ವಿಭಾಗೀಯ ದಂಡಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!