ಕರಾವಳಿಕ್ರೈಂ

ಗಾಂಜಾ ಮಾರಾಟಕ್ಕೆ ಯತ್ನ – ಪುತ್ತೂರಿನ ಯುವಕನ ಬಂಧನ



ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪುತ್ತೂರು ತಾಲೂಕಿನ 23 ವರ್ಷದ ಯುವಕನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ತೂಕದ ಗಾಂಜಾ ಸೇರಿದಂತೆ ಒಟ್ಟು 3.94 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ನ.5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಸಮೀಪ ಗಾಂಜಾ ಮಾರಾಟ ಮಾಡಲು ತಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡದ ಅಧಿಕಾರಿಗಳು ಹಾಗೂ ಪಣಂಬೂರು ಠಾಣೆಯ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ ಪುತ್ತೂರು ಪಡ್ಡಾಯೂರು ಮೊಹಮ್ಮದ್ ನಿಸಾರ್ (23) ಎಂಬಾತನನ್ನು ಬಂಧಿಸಿದ್ದಾರೆ.



ಆರೋಪಿಯಿಂದ ಅಂದಾಜು 1.90 ಲಕ್ಷ ರೂ. ಮೌಲ್ಯದ 3 ಕೆ.ಜಿ. 800 ಗ್ರಾಂ ಗಾಂಜಾ, 4 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಅಂದಾಜು 2 ಲಕ್ಷ ರೂ. ಮೌಲ್ಯದ ಕೆಎಲ್ 14 1662 ನೋಂದಣಿ ಸಂಖ್ಯೆಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ.


ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆಯೂ ಹಲವು ಬಾರಿ ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 137/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!