ಬೆಳ್ಳಾರೆಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪಟಾಕಿ ದಾಸ್ತಾನು: ಪ್ರಕರಣ ದಾಖಲು
ಸುಳ್ಯ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಪ್ಪೇರಿಯ ಗ್ರಾಮದ ಉರುಂಬಿ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪಟಾಕಿ ದಾಸ್ತಾನು ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಧಾಕರ ರೈ ಎಂಬವರ ಮನೆಯ ಬಳಿ ಅಕ್ರಮವಾಗಿ ಪಟಾಕಿ ದಾಸ್ತಾನು ಇರಿಸಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಮುರುಗೇಶ್ ಅವರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮನೆಯ ಅಂಗಳದ ಬಳಿ ಪಟಾಕಿ ಬಾಕ್ಸ್ಗಳು ಪತ್ತೆಯಾಗಿವೆ.
ಈ ಬಗ್ಗೆ ವಿಚಾರಣೆ ನಡೆಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಪಟಾಕಿಗಳನ್ನು ತಂದಿಟ್ಟಿರುವುದಾಗಿ ಸುಧಾಕರ ರೈ ತಿಳಿಸಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರ ಹಾಗೂ ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಪರವಾನಿಗೆ ಇಲ್ಲದೆ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವ ಆರೋಪದ ಮೇರೆಗೆ ನ.5ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 66/2026ರಂತೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 287, 228 ಹಾಗೂ ಸ್ಫೋಟಕ ಕಾಯ್ದೆಯ ಕಲಂ 9(B)(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




