ಶಾಹಿದ್ ಅಫ್ರಿದಿ ದಾಖಲೆ ಮುರಿದ ರೋಹಿತ್ ಶರ್ಮಾ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭಾನುವಾರ ಪಾಕಿಸ್ತಾನದ ಶಾಹಿದ್ ಅಫ್ರಿದಿ ಅವರ ದಾಖಲೆಯನ್ನು ಮುರಿದು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.

ಅಫ್ರಿದಿ ಹೆಸರಿನಲ್ಲಿದ್ದ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ದಾಖಲೆಯನ್ನು ಮುರಿದ ರೋಹಿತ್ ಇದೀಗ ಅತೀ ಹೆಚ್ಚು ಏಕದಿನ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಈ ಸರಣಿಗೂ ಮೊದಲು ರೋಹಿತ್ ಶರ್ಮಾ 349 ಸಿಕ್ಸರ್ಗಳನ್ನು ಬಾರಿಸಿದ್ದರು. 1996 ರಿಂದ 2015ರ ನಡುವೆ 398 ಏಕದಿನ ಪಂದ್ಯಗಳಲ್ಲಿ 351 ಸಿಕ್ಸರ್ಗಳನ್ನು ಬಾರಿಸಿದ್ದ ಅಫ್ರಿದಿ ಅವರಿಗಿಂತ ಹಿಂದುಳಿದಿದ್ದರು. ಆದರೆ ಇದೀಗ 352 ಸಿಕ್ಸರ್ ಸಿಡಿಸುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಪ್ರೆನೆಲನ್ ಸುಬ್ರಯೆನ್ ಎಸೆದ ಇನಿಂಗ್ಸ್ನ 15ನೇ ಓವರ್ನಲ್ಲಿ ರೋಹಿತ್ ಡೀಪ್ ಮಿಡ್ವಿಕೆಟ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸಿ ಆಫ್ರಿದಿ ಅವರ ದಾಖಲೆಯನ್ನು ಸರಿಗಟ್ಟಿದರು ಮತ್ತು ಕನಿಷ್ಠ ಇನಿಂಗ್ಸ್ಗಳಲ್ಲಿ ಅತಿ ಹೆಚ್ಚು ಏಕದಿನ ಸಿಕ್ಸರ್ಗಳನ್ನು ಬಾರಿಸಿದ ವಿಶ್ವ ದಾಖಲೆ ಬರೆದರು.





