ಸುಳ್ಯ: ಕಾರಿನ ಹಿಂಬದಿಗೆ ಸಿಲುಕಿ ಮಹಿಳೆ ಮೃತ್ಯು
ಸುಳ್ಯ: ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕಾರಿನ ಹಿಂಭಾಗಕ್ಕೆ ಸಿಲುಕಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನ.11ರಂದು ಸುಳ್ಯದಲ್ಲಿ ನಡೆದಿದೆ.

ಸುಳ್ಯ ಕಸಬ ನಿವಾಸಿ ಕಮಾಲುದ್ದೀನ್ (28) ಎಂಬವರ ತಾಯಿ ಕಮರುನ್ನಿಸಾ (46) ಮೃತಪಟ್ಟವರು.
ನ.11ರಂದು ಬೆಳಿಗ್ಗೆ ಕಮರುನ್ನಿಸಾ ಅವರು ಕೆಲಸ ಮಾಡುತ್ತಿದ್ದ ಸ್ಥಳದಿಂದ ಮನೆಗೆ ಬರಲು ಸಂಬಂಧಿಕ ಮಹರೂಪ್ ಎಂಬವರು ಕಾರಿನಲ್ಲಿ ಕರೆತಂದಿದ್ದರು. ಮನೆ ತಲುಪಿದ ಬಳಿಕ ಕಾರಿನಿಂದ ಇಳಿದ ಕಮರುನ್ನಿಸಾ ಅವರು ಕಾರಿನ ಹಿಂಭಾಗಕ್ಕೆ ಬಂದ ಸಂದರ್ಭದಲ್ಲಿ ಮಹರೂಪ್ ಅವರು ಕಾರನ್ನು ನಿರ್ಲಕ್ಷ್ಯದಿಂದ ಹಿಮ್ಮುಖವಾಗಿ ಚಲಾಯಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾರಿನ ಹಿಂಭಾಗಕ್ಕೆ ಸಿಲುಕಿದ ಕಮರುನ್ನಿಸಾ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 157/2026, ಕಲಂ 106(1) ಬಿಎನ್ಎಸ್-2023ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




