ಮಾಣಿಯಲ್ಲಿ ವ್ಯಕ್ತಿಗೆ ಬೊಲೇರೋ ಜೀಪ್ ಡಿಕ್ಕಿ ಹೊಡೆಯಲು ಯತ್ನ: ಆರೋಪಿ ಬಂಧನ
ಬಂಟ್ವಾಳ: ಮಾಣಿ ಜಂಕ್ಷನ್‌ನ ಮೈದಾನದ ಬಳಿಯ ಪಟಾಕಿ ಅಂಗಡಿ ಸಮೀಪ ವ್ಯಕ್ತಿಯೊಬ್ಬರಿಗೆ ಬೊಲೇರೋ ಜೀಪಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಮಾಣಿ ನಿವಾಸಿ ವಿಕೇಶ್ ಕೆ. (32) ಎಂಬವರು ನೀಡಿದ ದೂರಿನಂತೆ, ನ.9ರಂದು ಸಂಜೆ ಮಾಣಿ ಜಂಕ್ಷನ್‌ನ ಮೈದಾನದಲ್ಲಿರುವ ಪಟಾಕಿ ಅಂಗಡಿಯ ಬಳಿ ನಿಂತಿದ್ದ ವೇಳೆ, ಅವರಿಗೆ ಪರಿಚಯವಿದ್ದ ಜಗದೀಶ್ ಜೈನ್ ಎಂಬಾತ ಬೊಲೇರೋ ವಾಹನವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ವಿಕೇಶ್ ಅವರು ಜೀಪಿನ ಬಾನೆಟ್ ಮೇಲೆ ಹಾರಿ, ಬಳಿಕ ಅಲ್ಲಿಯೇ ಇದ್ದ ಮಣ್ಣಿನ ಮೇಲೆ ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಅವರ ಎಡಕಾಲಿನ ಮೊಣಗಂಟಿಗೆ ಗಾಯವಾಗಿದೆ. ಇದೇ ವೇಳೆ ವಿಕೇಶ್ ಅವರ ಸಂಬಂಧಿಕ ತೀರ್ಥಪ್ರಸಾದ್ ಅವರಿಗೂ ಜೀಪಿನಿಂದ ಡಿಕ್ಕಿ ಹೊಡೆಯಲು ಆರೋಪಿ ಯತ್ನಿಸಿದ್ದು, ಅವರು ಕೂಡ ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳದಲ್ಲಿ ಜನರು ಸೇರುತ್ತಿರುವುದನ್ನು ಕಂಡ ಆರೋಪಿ, ವಿಕೇಶ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 232/2026ರಂತೆ ಬಿಎನ್‌ಎಸ್ 2023ರ ಕಲಂ 109, 118(1), 352 ಹಾಗೂ 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿ ಜಗದೀಶ್ ಜೈನ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.




