ಬಿ.ಸಿ.ರೋಡ್ ಫ್ಲೈಓವರ್ನಲ್ಲಿ ಬೈಕ್ ಅಪಘಾತ: 40 ಅಡಿ ಎತ್ತರದಿಂದ ಸರ್ವಿಸ್ ರಸ್ತೆಗೆ ಬಿದ್ದ ಸವಾರ
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಬಿ.ಸಿ.ರೋಡ್ನಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಮೇಲೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಸವಾರರೊಬ್ಬರು ಸುಮಾರು 40 ಅಡಿ ಎತ್ತರದಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನ.10ರಂದು ಮಧ್ಯಾಹ್ನ ನಡೆದಿದೆ.
ಮಂಗಳೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ದಿಯಾ ಕೊಠಾರಿ ಎಂಬವರು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ, ಮುಂದೆ ಅದೇ ದಿಕ್ಕಿನಲ್ಲಿ ತೆರಳುತ್ತಿದ್ದ ಅವ್ ನೀಲ್ ಸಾವಿಯೋ ಡಿಸೋಜ ಅವರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಅವ್ ನೀಲ್ ಸಾವಿಯೋ ಡಿಸೋಜ ಅವರು ಸುಮಾರು 40 ಅಡಿ ಎತ್ತರದ ಫ್ಲೈಓವರ್ ಮೇಲಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಅವರ ಎದೆ, ಎಡಭುಜ, ಹೊಟ್ಟೆ, ಬೆನ್ನು ಹಾಗೂ ಸೊಂಟಕ್ಕೆ ಗಾಯಗಳಾಗಿವೆ.
ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಕಾರಣವಾದ ಬೈಕ್ ಸವಾರಿಣಿ ದಿಯಾ ಕೊಠಾರಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 136/2026, ಕಲಂ 281 ಹಾಗೂ 125(a) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




