ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಜೊಹ್ರಾನ್ ಮಾಮ್ದಾನಿ ಆಯ್ಕೆ
ನ್ಯೂಯಾರ್ಕ್: ಅಮೆರಿಕದಲ್ಲಿ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದೆ. 34 ವರ್ಷದ ಜೊಹ್ರಾನ್ ಮಾಮ್ದಾನಿ ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ವ್ಯಾಪಾರ ಯುದ್ಧದ ನಡುವೆಯೂ ಭಾರತೀಯ-ಅಮೆರಿಕನ್ ಮುಸ್ಲಿಂ ಒಬ್ಬರು ಮೇಯರ್ ಆಗಿ ಆಯ್ಕೆಯಾಗಿರುವುದು ಐತಿಹಾಸಿಕ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ.

ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷದ ಪ್ರಮುಖ ಅಭ್ಯರ್ಥಿ ಮಮ್ದಾನಿ ಅವರು ಸ್ವತಂತ್ರ ಅಭ್ಯರ್ಥಿಯೂ ಆಗಿರುವ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ.
ಈ ಗೆಲುವಿನೊಂದಿಗೆ ಮಮ್ದಾನಿ ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ ಮೇಯರ್, ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಹಾಗೂ ಆಫ್ರಿಕಾದಲ್ಲಿ ಜನಿಸಿದ ಮೊದಲ ಮೇಯರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಚುನಾವಣೆ ನಡೆಯಿತು. ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಧ್ಯಕ್ಷೀಯ ಅವಧಿಯಲ್ಲಿ ಇದು ಮೊದಲ ಪ್ರಮುಖ ಚುನಾವಣೆಯಾಗಿರುವುದರಿಂದ ಈ ಚುನಾವಣೆಯನ್ನು ಮಹತ್ವದ್ದಾಗಿ ಪರಿಗಣಿಸಲಾಗಿದೆ
2026ರ ಜನವರಿ 1 ರಂದು ವಿಶ್ವದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಅಮೆರಿಕದ ನ್ಯೂಯಾರ್ಕ್ ನಗರದ ಮೇಯರ್ ಆಗಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಕೇವಲ 34ನೇ ವರ್ಷಕ್ಕೆ ಈ ಹುದ್ದೆಗೇರುವ ಮೂಲಕ ಅವರು ಕಳೆದ ಒಂದು ಶತಮಾನದಲ್ಲೇ ಈ ಹುದ್ದೆಗೇರಿದ ಅತ್ಯಂತ ಕಿರಿಯ ವಯಸ್ಸಿಗ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.



