ಶಿವಮೊಗ್ಗ: ಒಳಮೀಸಲಾತಿ ವರದಿ ಅಂಗೀಕಾರದ ವಿರುದ್ಧ ಸ್ಫೋಟಗೊಂಡ ಆಕ್ರೋಶ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ
ಶಿವಮೊಗ್ಗ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಶಿಕಾರಿಪುರದಲ್ಲಿ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆ ಮತ್ತು ಕಚೇರಿ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟಿದ್ದರೂ ಆಕ್ರೋಶಿತ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದಾರೆ.
ಬಂಜಾರ ಸಮುದಾಯದ ನೂರಾರು ಜನರು ಶಿಕಾರಿಪುರ ಪಟ್ಟಣದಲ್ಲಿನ ಯಡಿಯೂರಪ್ಪ ಅವರ ಮನೆ ಕಡೆಗೆ ಬ್ಯಾರಿಕೇಡ್ ಮುರಿದು ನುಗ್ಗಿದ್ದು ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು, ಚಪ್ಪಲಿ ತೂರಿದ್ದರೆ ಕೆಲವು ಯುವಕರು ಕಚೇರಿ ಚಾವಣಿ ಏರಿ ಬಿಜೆಪಿ ಬಾವುಟವನ್ನು ಕಿತ್ತು ಹಾಕಿದ್ದಾರೆ. ಮೋದಿ ಚಿತ್ರವಿದ್ದ ಫ್ಲೆಕ್ಸ್ ಗಳನ್ನು ಹರಿದು ಹಾಕಿದ್ದಾರೆ.
ಯಡಿಯೂರಪ್ಪ ನವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಲಾಗಿದ್ದ ಸೀರೆಗಳನ್ನು ತಂದ ಯಡಿಯೂರಪ್ಪ ಅವರ ಮುಂದೆ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನಮಗೆ ನ್ಯಾಯ ಕೊಡಿ ಎಂದು ಪ್ರತಿಭಟನಾಕಾರರು ಕೂಗುತ್ತಿದ್ದ ದೃಶ್ಯ ಕಂಡು ಬಂದಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದು ಕಲ್ಲು ತೂರಾಟದಲ್ಲಿ ಸಣ್ಣಪುಟ್ಟ ಗಾಯಗಳೂ ಆಗಿವೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದೆ.