ನನಗೆ ಮತ್ತು ಪ್ರಧಾನಿ ಮೋದಿಗೆ ಬಿಜೆಪಿ ಯವರಿಂದ ಅವಮಾನ- ಅಮಳ ರಾಮಚಂದ್ರರಿಂದ ಪೋಲಿಸ್ ದೂರು
ಪುತ್ತೂರು: ನನ್ನನ್ನು ಮತ್ತು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಅವಮಾನಿಸಿರುತ್ತಾರೆ ಹಾಗೂ ನಮ್ಮಿಬ್ಬರ ಘನತೆಗೆ ಕುಂದು ತಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್ ಮುಖಂಡ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾನು ನನ್ನ ಫೇಸ್‌ಬುಕ್ ಖಾತೆಯಲ್ಲಿ ಮೇ.13ರಂದು ಹಂಚಿಕೊಂಡ ಕೆಲವು ವ್ಯಂಗ್ಯಚಿತ್ರಗಳನ್ನು ಹಾಗೂ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಝ್ ಶರೀಫ್‌ನನ್ನು ಉದ್ದೇಶಿಸಿ “ದೇಶದ ಸಹೋದರತೆಗೆ – ಸಾರ್ವಭೌಮತೆಗೆ ಕಾರ್ಕೋಟಕ ವಿಷ ! ” ಎಂಬ ವಾಕ್ಯದೊಂದಿಗೆ “ಇವರು ವಿಶ್ವಗುರುವಲ್ಲ, ವಿಷಗುರು !” ಎಂಬ ಬರಹವಿರುವ ಪೋಸ್ಟ್‌ನ್ನು ಹಂಚಿಕೊಂಡಿರುವುದನ್ನು , ಈ ಪೋಸ್ಟ್‌ಗಳು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನ ಎಂದು ಪುತ್ತೂರು ಬಿ.ಜೆ.ಪಿ. ನಗರ ಮಂಡಲ ಅಧ್ಯಕ್ಷರಾದ .ಶಿವಕುಮಾರ್ ಪಿ.ಬಿ. ಮತ್ತು ಪುತ್ತೂರು ಬಿ.ಜೆ.ಪಿ. ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ಮತ್ತು ಇತರರು ನನ್ನ ಮೇಲೆ ತಮ್ಮ ಠಾಣೆಯಲ್ಲಿ ದೂರು ನೀಡಿರುವುದು ಮಾತ್ರವಲ್ಲದೆ ಈ ದೂರಿನ ಪ್ರತಿಯನ್ನು ಸಾಮಾಜಿಕ ಮಾಧ್ಯಮವಾದ ವಾಟ್ಸ್ ಆಪ್ ನಲ್ಲಿ ಹಂಚಿಕೊಂಡಿರುತ್ತಾರೆ. ಈ ಪೈಕಿ “ದೇಶದ ಸಹೋದರತೆಗೆ – ಸಾರ್ವಭೌಮತೆಗೆ ಕಾರ್ಕೋಟಕ ವಿಷ ! ” ಎಂಬ ವಾಕ್ಯದೊಂದಿಗೆ ಹಾಕಿದ “ಇವರು ವಿಶ್ವಗುರುವಲ್ಲ, ವಿಷಗುರು !” ಎಂಬ ಬರಹವಿರುವ ಪೋಸ್ಟ್ , ನಾನು ನನ್ನ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ ಈ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿರುವುದಿಲ್ಲ. ಹಾಗೂ ಅದು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಝ್ ಶರೀಫ್‌ನನ್ನು ದೃಷ್ಠಿಯಲ್ಲಿಟ್ಟುಕೊಂಡು ಹಾಕಿದ ಪೋಸ್ಟ್ ಆಗಿರುತ್ತದೆ. ವಿಚಾರ ಹೀಗಿದ್ದರೂ ಇವುಗಳು ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರನ್ನು ಉದ್ದೇಶಿಸಯೇ ಹಾಕಿರುವುದೆಂದು ತಿರುಚಿ, ತಮಗೆ ದೂರು ನೀಡಿ, ಆ ದೂರಿನ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸುವುದರ ಮೂಲಕ ಮತ್ತು ಪತ್ರಿಕೆ ಹಾಗೂ ಟಿ.ವಿ. ಪ್ರತಿನಿಧಿಗಳಿಗೆ ರವಾನಿಸುವುದರ ಮೂಲಕ, ಈ ವಿಚಾರ ಕರ್ನಾಟಕದ ಎಲ್ಲೆಡೆ ಟಿ.ವಿ. ಮತ್ತು ವೆಬ್ ನ್ಯೂದ್‌ಗಳಲ್ಲಿ ಪ್ರಸಾರವಾಗಿ ನಮ್ಮ ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳು ವಿಶ್ವಗುರುಗಳಲ್ಲ , ವಿಷ ಗುರುಗಳು ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡುವಂತೆ ಬಹಳ ಬುದ್ದಿವಂತಿಕೆಯಿಂದ ಸಂಚು ನಡೆಸಿ , ಪ್ರಧಾನಮಂತ್ರಿಗಳನ್ನು ಅವಮಾನಿಸಿರುತ್ತಾರೆ.
ಹೀಗೆ ಮಾಡುವುದರ ಮೂಲಕ ನನ್ನನ್ನು ಮತ್ತು ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರನ್ನು ಅವಮಾನಿಸಿರುತ್ತಾರೆ ಹಾಗೂ ನಮ್ಮಿಬ್ಬರ ಘನತೆಗೆ ಕುಂದು ತಂದಿರುತ್ತಾರೆ. ಇದು ನನಗೆ ವೈಯಕ್ತಿಕವಾಗಿ ಹಾಗೂ ಈ ದೇಶದ ಪ್ರಜೆ ಎಂಬ ನೆಲೆಯಿಂದ ನೋವನ್ನು ಉಂಟುಮಾಡಿರುತ್ತದೆ.
ಆದ್ದರಿಂದ ನನ್ನ ಮತ್ತು ದೇಶದ ಪ್ರಧಾನ ಮಂತ್ರಿಗಳ ಅವಹೇಳನ ಮಾಡಿದ ಪುತ್ತೂರು ಬಿ.ಜೆ.ಪಿ. ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿ.ಬಿ. ಮತ್ತು ಪುತ್ತೂರು ಬಿ.ಜೆ.ಪಿ. ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ಇತರರ ಮೇಲೆ ತನಿಖೆ ನಡೆಸಿ, ಅವರ ವುರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿರವಿಪ್ರಸಾದ್ ಶೆಟ್ಟಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಜೊತೆಗಿದ್ದರು