ಕರಾವಳಿ

ವಿವಾದಾತ್ಮಕ ಭಾಷಣ: ಗ್ರಾಮ ಪಂಚಾಯತ್ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಮತ್ತು ವಿವಾದಾತ್ಮಕ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆದ ʼಸುಹಾಸ್ ಶೆಟ್ಟಿ ನುಡಿ ನಮನʼ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಮುಸ್ಲಿಂ ಆಟೋ ರಿಕ್ಷಾ ಚಾಲಕರ ಬಗ್ಗೆ ಹಾಗೂ ಮುಸ್ಲಿಂ ಅಂಗಡಿಯಗಳಲ್ಲಿ ವ್ಯಾಪಾರ-ವ್ಯವಹಾರ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ ಎಂದು ಆರೋಪಿಸಿ ಹರಿಪ್ರಸಾದ್ ಎಂಬವರು ದೂರು ನೀಡಿದ್ದು, ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ದೂರು ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಮೇ.14 ರಂದು BNS 2023 (u/s 196(1)(a) ಅಡಿಯಲ್ಲಿ ಭಾರತಿ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆದ ಸುಹಾಸ್ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ ಈ ವಿವಾದಿತ ಭಾಷಣ ಮಾಡಿದ್ದಾರೆ.


“ಯಾವುದೇ ವಸ್ತುಗಳಿಗೆ ದರ ಸ್ವಲ್ಪ ಜಾಸ್ತಿಯಾದರೂ ನಮ್ಮವರ ಅಂಗಡಿಯಲ್ಲಿಯೇ ಖರೀದಿಸಿ ಅದು ಹಿಂದೂ ಸಮುದಾಯಕ್ಕೆ ಶಕ್ತಿ ತುಂಬುತ್ತದೆ. ಅದರಲ್ಲಿ ಒಂದಿಷ್ಟು ಹಣವಾದರೂ ಅವರು ಸಂಘಟನೆಗಳಿಗೂ ನೀಡುತ್ತಾರೆ. ಬಹಳ ಚೆನ್ನಾಗಿ ಮಾತನಾಡುತ್ತಾರೆ ಎಂದು ಅವರ ಮಾತನ್ನು ಕೇಳಿ ಅಲ್ಲಿ ದರ ಕಡಿಮೆಯಿದೆ ಎಂದು ಅವರ ಅಂಗಡಿಗಳಿಗೆ ಹೋಗಬೇಡಿ ನಮ್ಮವರ ಅಂಗಡಿಯಲ್ಲಿಯೇ ಖರೀದಿಸಿ” ಎಂದು ಭಾರತಿ ಶೆಟ್ಟಿ ಕರೆ ನೀಡಿದ್ದರು.”ಗುರುವಾಯನಕೆರೆ ಪೇಟೆಯಲ್ಲಿ ಅವರ ರಿಕ್ಷಾ ಚಾಲಕರೇ ಹೆಚ್ಚಾಗಿದ್ದಾರೆ. ಬೆಳಗ್ಗಿನ ಜಾವ ಗುರುವಾಯನಕೆರೆಗೆ ಬಂದರೆ ಅಲ್ಲಿ ನಮ್ಮ ರಿಕ್ಷಾ ಚಾಲಕರು ಚಲಾಯಿಸುವ ರಿಕ್ಷಾಗಳೇ ಇರುವುದಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹಿಂದೂ ರಿಕ್ಷಾ ಚಾಲಕರು ಒಬ್ಬರಾದರೂ ಬೆಳಗ್ಗಿನ ಜಾವ ಅಲ್ಲಿರಬೇಕು, ಹೀಗೆಲ್ಲ ಹಿಂದೂಗಳನ್ನು ಜಾಗೃತರಾಗಿಸುವ ಮೂಲಕ ಅವರನ್ನು ಕಟ್ಟಿ ಹಾಕಬಹುದೇ ಹೊರತು ಇನ್ಯಾವ ರೀತಿಯಲ್ಲೂ ಅಲ್ಲ” ಎಂದು ಭಾರತಿ ಶೆಟ್ಟಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದರು. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *

error: Content is protected !!