ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ- ಮತ್ತೆ ಮೂವರು ಆರೋಪಿಗಳ ಬಂಧನ
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಕಳವಾರು ಆಶ್ರಯ ಕಾಲೊನಿ ನಿವಾಸಿ ಅಜರುದ್ದೀನ್ ಅಲಿಯಾಸ್ ಅಜರ್, ಅಜ್ಜು(29), ಕಾಪು ನಿವಾಸಿಯಾಗಿದ್ದ ಪ್ರಸ್ತುತ ಬಜ್ಪೆ ಭಟ್ರಕೆರೆ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್(24), ಫರಂಗಿಪೇಟೆ ನಿವಾಸಿಯಾಗಿದ್ದ ಪ್ರಸ್ತುತ ಹಾಸನ ನಿವಾಸಿ ನೌಷದ್ ಅಲಿಯಾಸ್ ವಾಮಂಜೂರು ನೌಷದ್(39), ಎಂದು ಗುರುತಿಲಾಗಿದೆ.
ಆರೋಪಿಗಳ ಪೈಕಿ ಅಜರುದ್ದೀನ್ ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿದ್ದಾನೆ ಎಂದು ಹೇಳಲಾಗಿದೆ.
ಮತ್ತೋರ್ವ ಆರೋಪಿ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ ಎಂಬಾತ ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಆರೋಪಿಗಳಿಗೆ ಸಹಕರಿಸಿದ್ದ ಎಂದು ಹೇಳಲಾಗಿದೆ. ಇನ್ನೋರ್ವ ಆರೋಪಿ ನೌಷದ್ ಎಂಬಾತ ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಿಳಿಸಲಾಗಿದೆ. ಈತ ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳ ಆರೊಪಿಯಾಗಿದ್ದ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳ ಪೈಕಿ ಅಜರುದ್ದೀನ್ ಅಲಿಯಾಸ್ ಅಜರ್, ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳಾದ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ ಮತ್ತು ನೌಷದ್ ಎಂಬವರನ್ನು ಹೆಚ್ಚಿನ ತನಿಖೆಗೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.