ಬೆಳ್ತಂಗಡಿ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಬೆಳ್ತಂಗಡಿ: ನದಿಗೆ ಈಜಲು ಹೋದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.28 ರಂದು ಸಂಜೆ ವರದಿಯಾಗಿದೆ. ನಡ ಗ್ರಾಮದ ಅಂತ್ರಾಯ ಪಲ್ಕೆ ಎಂಬಲ್ಲಿರುವ ನದಿಗೆ ಈಜಲು ಹೋದ ನಾಲ್ವರು ಬಾಲಕರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಉಜಿರೆ ಗ್ರಾಮದ ಕುಂಟಿನಿ ನಿವಾಸಿ, ಹತ್ತನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಹಫೀಝ್ (15) ಮೃತಪಟ್ಟ ಬಾಲಕ.
ಪರೀಕ್ಷೆ ಮುಗಿಸಿ ಮೂವರು ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದ ಈ ವೇಳೆ ಘಟನೆ ಸಂಭವಿಸಿದ್ದು, ಸ್ಥಳೀಯರು ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿದರೂ ಆವೇಳೆಗೆ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



