ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧದ ಶೇ.60 ಕಮಿಷನ್ ಆರೋಪವನ್ನೂ ಸೇರಿಸಿ ಎಸ್ಐಟಿ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ ಆಗ್ರಹ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಶೇ.60ರಷ್ಟು ಕಮಿಷನ್ ಆರೋಪ ಕೇಳಿ ಬಂದಿದ್ದು, ಈ ಆರೋಪವನ್ನೂ ಸೇರಿಸಿ ಎಸ್ಐಟಿ ತನಿಖೆ ನಡೆಸಬೇಕೆಂದು ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಶೇ.40 ಕಮಿಷನ್ ಆರೋಪದ ತನಿಖೆಗೆ ಎಸ್‌ಐಟಿ ರಚಿಸಲು ತೀರ್ಮಾನಿಸಿದೆ. ಹಿಂದಿನ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಸುಳ್ಳು ಅಪಪ್ರಚಾರ ಮಾಡಿದ್ದರು. ಅದರ ತನಿಖೆಗಾಗಿ ಆಯೋಗ ರಚನೆ ಮಾಡಿದ್ದರು. ಆ ಕಮಿಷನ್ ವರದಿಯಲ್ಲಿ ಏನಿದೆ ಎನ್ನುವುದು ಸಾರ್ವಜನಿಕರಿಗೂ ಗೊತ್ತಾಗಬೇಕು. ಹಾಗೆಯೇ, ಎರಡು ವರ್ಷದಲ್ಲಿ ಈ ಸರ್ಕಾರದ ವಿರುದ್ಧ ಲೋಕೋಪಯೋಗಿ, ಅಬಕಾರಿ, ವಿದ್ಯುತ್ ಗುತ್ತಿಗೆದಾರರ ಸಂಘ ಮಾಡಿರುವ ಶೇ 60 ಕಮಿಷನ್ ಆರೋಪದ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.