ಕರಾವಳಿರಾಜಕೀಯರಾಜ್ಯ

ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿ: ಸದನದಲ್ಲಿ ತುಳುವಿನಲ್ಲೇ ವಿಚಾರ ಮಂಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಸೇರಿಸಬೇಕು ಎಂದು ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ತುಳು ಭಾಷೆಯಲ್ಲೇ ವಿಧಾನಸಭಾ ಅಧಿವೇಶನದಲ್ಲಿ ವಿಚಾರವನ್ನು ಮಂಡಿಸಿದ್ದು, ಶಾಸಕರ ಬೇಡಿಕೆಗೆ ಸರಕಾರದಿಂದ ಗಟ್ಟಿ ಭರವಸೆ ದೊರೆತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಲಿದೆ ಎಂದು ಸರಕಾರ ಭರವಸೆಯನ್ನು ನೀಡಿದೆ.

ತುಳುವಿಗೆ ೨೦೦೦ ವರ್ಷದ ಇತಿಹಾಸವಿದೆ: ತುಳುಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ತುಳು ಮಾತನಾಡುವ ಮಂದಿ ವಿಶ್ವದೆಲ್ಲೆಡೆ ಇದ್ದಾರೆ. ತುಳು ಭಾಷೆಗೆ ಮಾನ್ಯತೆ ಸಿಗಬೇಕು ಎಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ. ಎಂಟನೇ ಪರಿಚ್ಚೇಧಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇನ್ನೊಂದು ಕಡೆ ಇದೆ ಇದೆಲ್ಲದರ ನಡುವೆ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹವನ್ನು ಶಾಸಕನಾಗಿ ಕಳೆದ ಒಂದು ವರ್ಷದಿಂದ ಮಾಡುತ್ತಿದ್ದೇನೆ.

1994ರಲ್ಲಿ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದ್ದಾರೆ, 2007 ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿಯನ್ನು ಸ್ಥಾಪನೆ ಮಾಡಿದೆ, ಆಕಾಶವಾಣಿಯಲ್ಲಿ 1976 ರಿಂದ ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮ ಪ್ರಸಾರವಾಗುತ್ತಿದೆ, ಅಮೇರಿಕಾದಲ್ಲಿ ಸಿಆರ್ ಎಕ್ಸಾಮ್‌ಗೆ ಅರ್ಜಿ ನಮೂನೆಯಲ್ಲೂ ವಿಶ್ವದ 122 ಭಾಷೆಯ ಜೊತೆಗೆ ತುಳುವಿಗೆ ಮಾನ್ಯತೆ ನೀಡಲಾಗಿದೆ, ಗೂಗಲ್ ಸಂಸ್ಥೆಯವರು ತರ್ಜುಮೆ ಮಾಡಬಲ್ಲ ಭಾಷೆಗಳ ಪಟ್ಟಿಯಲ್ಲಿ ತುಳುವನ್ನು ಸೇರ್ಪಡೆ ಮಾಡಿದ್ದಾರೆ. ಇಷ್ಟೆಲ್ಲಾ ಇರುವಾಗ ನಮ್ಮ ರಾಜ್ಯದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಮೂರು ರಾಜ್ಯಗಳಿಗೆ ಅಧ್ಯಯನ ತಂಡ ಕಳಿಸಿದ್ದೇನೆ: ಬಿಹಾರ, ಪಶ್ಚಿಮಬಂಗಾಳ ಮತ್ತು ಆಂದ್ರಕ್ಕೆ ವಿಶೇಷ ಪ್ರತಿನಿಧಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ಕಳಿಸಿದ್ದೇನೆ. ಈ ಮೂರು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಯಾವ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ ಎಂಬುದನ್ನು ಅಧ್ಯಯನ ನಡೆಸಲಾಗಿದೆ. ಆಂದ್ರದಿಂದ ವರದಿಯನ್ನು ತರಿಸಿದ್ದೇನೆ. ಈ ವರದಿಯನ್ನು ಸರಕಾರದ ಮುಂದೆ ಇಡಲಿದ್ದು ಅದರ ಆಧಾರದಲ್ಲಿ ಕರ್ನಾಟಕದಲ್ಲಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ನಾನು ಸ್ವಂತ ಖರ್ಚಿನಲ್ಲೇ ಅಧ್ಯಯನ ತಂಡವನ್ನು ಮೂರು ರಾಜ್ಯಗಳಿಗೆ ಕಳಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ನಿಕ್ಲು ಗಲಾಟೆ ಮಲ್ಪೊಡ್ಚಿ ಕುಲ್ಲುಲೆ ಮಾರ್ರೆ: ಪುತ್ತೂರು ಶಾಸಕ ಅಶೋಕ್ ರೈಯವರು ಸದನದಲ್ಲಿ ತುಳು ಭಾಷೆಯಲ್ಲಿ ಮಾತನಾಡುವ ವೇಳೆ ಮಧ್ಯದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್‌ರಲ್ಲಿ ಈರ್ ಬೊಕ್ಕ ಪಾತೆರ‍್ಲೆ, ಇತ್ತೆ ಯಾನ್ ಪಾತರೊಂದುಲ್ಲೆ ಎಂದು ಶಾಸಕ ಅಶೋಕ್ ರೈ ವೇದವ್ಯಾಸ ಕಾಮತರಿಗೆ ಹೇಳಿದಾಗ ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ಯು ಟಿ ಖಾದರ್ ನಿಕ್ಲು ಗಲಾಟೆ ಮಲ್ಪೊಡ್ಚಿ ಮಾರ್ರೆ ಈರ್ ಕುಲ್ಲುಲೆ ಎಂದು ಶಾಸಕ ವೇದವ್ಯಾಸ ಕಾಮತರಿಗೆ ಕುಳಿತುಕೊಳ್ಳಲು ಹೇಳಿದರು.

ಇದೇನು ಮಂಗಳೂರು ಅಧಿವೇಶನವಾ: ಆರ್ ಅಶೋಕ್ ಸದನದಲ್ಲಿ ಶಾಸಕ ಅಶೋಕ್ ರೈ ಮತ್ತು ಸಭಾಪತಿ ಯು ಟಿ ಖಾದರ್ ರವರು ತುಳುವಿನಲ್ಲಿ ಮಾತನಾಡುತ್ತಿದ್ದ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಇದೇನು ಮಂಗಳೂರು ಅಧಿವೇಶಧನವಾ? ಎಂದು ನಗುತ್ತಲೇ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಅಶೋಕ್ ರೈಯವರು ವಿರೋಧ ಪಕ್ಷದ ನಾಯಕರಾದ ಆರ್ ಆಶೋಕ್ ರವರೇ ನಾವು ತುಳುವಿನಲ್ಲಿ ಮಾತನಾಡಿದ್ದನ್ನು ಕನ್ನಡದಲ್ಲಿ ಹೇಳುತ್ತೇನೆ. ನೀವು ನಮ್ಮ ಹೋರಾಟಕ್ಕೆ, ನಮ್ಮ ಬೇಡಿಕೆಗೆ ಬೆಂಬಲವನ್ನು ನೀಡಬೇಕು, ಇಡೀ ಸದನ ನಮ್ಮ ನಿಲುವಿಗೆ ಬೆಂಬಲ ನೀಡಬೇಕು ಆ ಮೂಲಕ ತುಳು ಭಾಷೆಗೆ ಸರಕಾರದಿಂದ ಮಾನ್ಯತೆ ದೊರೆಯುವಂತಾಗಲಿ ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ತುಳುವಿಗೆ ಲಿಪಿ ಇದೆ, ವಿಶ್ವದಲ್ಲೆಡೆ ತುಳು ಮಾತನಾಡುವ ಮಂದಿ ಇದ್ದಾರೆ ಎಂದು ಹೇಳಿದ ಶಾಸಕ ಅಶೋಕ್ ರೈಯವರು ಸಭಾಧ್ಯಕ್ಷೆರೇ ಈರ್ ಸಪೋರ್ಟು ಮಲ್ಪೊಡು, ಈರ್‌ನ ಸಹಕಾರ ಎಂಕ್ಲೆಗ್ ಬೋಡು ಎಂದು ಮನವಿ ಮಾಡಿದರು.

ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ವೇದವ್ಯಾಸ ಕಾಮತ್: ಸದನದಲ್ಲಿ ಮಾತನಾಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ತುಳು ವಿಚಾರದಲ್ಲಿ ಪ್ರಾರಂಭದಿಂದಲೇ ಸರಕಾರದ ಗಮನಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ನಿಮ್ಮ ಕಾಳಜಿಗೆ ಅಭಿನಂದನೆ; ಸಚಿವ ಖರ್ಗೆ ತನ್ನ ಸ್ವಂತ ಖರ್ಚಿನಲ್ಲಿ ಅಧ್ಯಯನ ತಂಢವನ್ನು ಮೂರು ರಾಜ್ಯಕ್ಕೆ ಕಳುಹಿಸುವ ಮೂಲಕ ತನ್ನ ಊರಿನ ಮಾತೃಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎನ್ನುವ ನಿಮ್ಮ ಕಾಳಜಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಪ್ರಿಯಾಂಕ ಖರ್ಗೆ ಶಾಸಕ ಅಶೋಕ್ ರೈಯವರಿಗೆ ಅಭಿನಂದನೆ ಸಲ್ಲಿಸಿದರು. ಮಾತೃಭಷೆಯ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ ಅದರಲ್ಲೂ ಅಶೋಕ್ ರೈಯವರು ಈ ವಿಚಾರದಲ್ಲಿ ಒಂದು ಹಜ್ಜೆ ಮುಂದೆ ಇದ್ದಾರೆ ಇದು ಅಭಿನಂದನಾರ್ಹ ಎಂದು ಸಚಿವರು ಸಭೆಯಲ್ಲಿ ಹೇಳಿದರು.

ಖಂಡಿತವಾಗಿಯೂ ಬೇಡಿಕೆ ಈಡೇರಲಿದೆ: ಪ್ರಿಯಾಂಕ ಖರ್ಗೆ ಡಾ.ಮೋಹನ್ ಆಳ್ವರ ನೇತೃತ್ವದ ಸಮಿತಿಯ ವರದಿಯಲ್ಲಿ ಸಾಧ್ಯವಿದೆ ಎಂಬುದರ ಬಗ್ಗೆ ವರದಿ ನೀಡಲಾಗಿದೆ.. ತನ್ನ ಸ್ವಂತ ಖರ್ಚಿನಲ್ಲಿ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಿದ ಶಾಸಕ ಅಶೋಕ್ ರೈಯವರ ಕಾಳಜಿಯನ್ನು ಮೆಚ್ಚಲೇಬೇಕು. ತುಳು ಭಾಷೆ, ಅದರ ಸಂಸ್ಕೃತಿ, ಅದರ ಸೌಂದರ್ಯ, ಪ್ರಾಚೀನತೆ, ಎಲ್ಲವೂ ಗೌರವದಿಂದ ಕೂಡಿದೆ. ಸರಕಾರದ ಮುಂದೆ ಈ ಪ್ರಸ್ತಾಪ ಇದೆ. ತುಳುವಿಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಸರಕಾರಕ್ಕೆ ಮುತುವರ್ಜಿ ಇದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಸಭೆಗೆ ತಿಳಿಸಿದರು. ವೈಯುಕ್ತಿಕವಾಗಿಯೂ ಈ ಪ್ರಸ್ತಾಪಕ್ಕೆ ನನ್ನ ಬೆಂಬಲ ಇದೆ ಎಂದು ಸಚಿವರು ಹೇಳಿದರು.

ಸಚಿವರ ಸಭೆ ಕರೆದು ತೀರ್ಮಾನಿಸಿ: ಸ್ಪೀಕರ್ ಈ ವಿಚಾರದಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರನ್ನೊಳಗೊಂಡಂತೆ ಆ ಭಾಗದ ಶಾಸಕರ ಸಭೆಯನ್ನು ಕರೆದು ತೀರ್ಮಾನ ಕೈಗೊಳ್ಳುವಂತೆ ಸ್ಪೀಕರ್ ಯು ಟಿ ಖಾದರ್ ರವರು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚನೆಯನ್ನು ನೀಡಿದರು.

ಎರಡನೇ ಬಾರಿಗೆ ತುಳುವಿನಲ್ಲಿ ಮಾತು ಶಾಸಕ ಅಶೋಕ್ ರೈಯವರು ತಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ತುಳುವಿನಲ್ಲಿ ಮಾತನಾಡಿದ್ದರು. ಈ ವಿಚಾರ ಅತೀ ಹೆಚ್ಚು ವೈರಲ್ ಆಗಿತ್ತು. ಅಧಿವೇಶನದ ಇತಿಹಾಸದಲ್ಲೇ ಮೊದಲ ಬಾರಿಗೆ ತುಳುವಿನಲ್ಲಿ ಮಾತನಾಡುವ ಮೂಲಕ ತುಳುವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಾಡಿದ್ದರು. ಇದೀಗ ಎರಡನೇ ಬಾರಿಗೆ ತುಳುವಿನಲ್ಲಿ ಅಧಿವೇಶನದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!