ಮೆಸ್ಕಾಂನಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಶಾಸಕ ಅಶೋಕ್ ರೈ ಸಂಕಲ್ಪ
ಪುತ್ತೂರು: ಮೆಸ್ಕಾಂ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿಯಲ್ಲಿ ಪುತ್ತೂರಿನ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯಬೇಕು ಎಂಬ ನಿಟ್ಟಿನಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಕಳೆದ ಒಂದು ವರ್ಷದಿಂದ ಪುತ್ತೂರು ಕೆಎಸ್‌ಆರ್‌ಟಿಸಿಯಲ್ಲಿ ಸುಮಾರು 130 ಮಂದಿಗೆ ಚಾಲಕ ಹುದ್ದೆಯನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಮೆಸ್ಕಾಂ ಇಲಾಖೆಯಲ್ಲಿ ಪವರ್ ಮ್ಯಾನ್ ಹುದ್ದೆಗೆ ಸ್ಥಳೀಯರಿಗೆ ಉದ್ಯೋಗವಕಾಶ ಕೊಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಇಂಧನ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮೆಸ್ಕಾಂ ಹುದ್ದೆ ಭರ್ತಿ ವೇಳೆ ಸ್ಥಳೀಯರಿಗೆ ಅವಕಾಶ ಕೊಡುವುದು ಮಾತ್ರವಲ್ಲದೆ ರಾಜ್ಯದಲ್ಲಿ ಏಕಕಾಲದಲ್ಲಿ ಅರ್ಹತಾ ಪರೀಕ್ಷೆಯನ್ನು ನಡೆಸಬೇಕು ಎಂದು ಮನವಿ ಮಾಡಿದ್ದರು. ಶಾಸಕ ಅಶೋಕ್ ರೈ ಅವರ ಮನವಿಗೆ ಸರಕಾರ ಕೂಡಾ ಸ್ಪಂದನೆ ನೀಡಿತ್ತು.
ಪುತ್ತೂರು ಶಾಸಕರ ಕಚೇರಿ ಮೂಲಕ ಪುತ್ತೂರು, ಸುಳ್ಯ, ಕಡಬ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಸುಮಾರು 500 ಮಂದಿ ಈಗಾಗಲೇ ಮೆಸ್ಕಾಂ ಪವರ್‌ಮ್ಯಾನ್ ಕಂಬ ಹತ್ತುವ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನ.4,5 ಮತ್ತು 6 ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಕಂಬ ಹತ್ತುವ ತರಬೇತಿ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ತರಬೇತಿಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಆ ದಿನಕ್ಕೆ ಮುಂಚಿತವಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.