ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಕ-ಶಿಕ್ಷಕ ಸಭೆ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಾಲ್ಮರ ಪ್ರೌಢಶಾಲೆಯ ರಕ್ಷಕ- ಶಿಕ್ಷಕ ಸಭೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೋಡಿಂಬಾಡಿ ಕ್ಲಸ್ಟರ್ ಸಿ.ಆರ್.ಪಿ. ಮುಹಮ್ಮದ್ ಅಶ್ರಫ್ ಮಾತನಾಡಿ, ಸದಾ ಮಕ್ಕಳ ಏಳಿಗೆಯನ್ನು ಬಯಸುವ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಭವಿಷ್ಯವನ್ನು ಪ್ರಬಲವಾಗಿ ರೂಪಿಸಲು ಪ್ರಯತ್ನಶೀಲರಾಗಬೇಕೆಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ ಮುಹಮ್ಮದ್ ಸಾಬ್ ಹಾಜಿ ಮಾತನಾಡಿ ಮಕ್ಕಳ ಉಜ್ವಲ ಭವಿಷ್ಯವು ಶಿಕ್ಷಕ ಮತ್ತು ಪೋಷಕರ ಸಹಕಾರದಿಂದ ನಿರ್ಮಿತವಾಗುತ್ತದೆ, ಆದ್ದರಿಂದ ಶಾಲೆ ಮತ್ತು ಮನೆಯ ನಡುವೆ ಬಲವಾದ ಸಂವಹನ ಇದ್ದಾಗ ಮಕ್ಕಳು ಕಲಿಕೆಯಲ್ಲಿ ಯಶ ಸಾಧಿಸುತ್ತಾರೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸಂಸ್ಥೆಯು ಸದಾ ಮುಂಚೂಣಿಯಲ್ಲಿದ್ದು, ಶೈಕ್ಷಣಿಕವಾಗಿ ಆಧುನಿಕ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ, ಪ್ರತಿ ಪೊಷಕರು ಈ ದಿಸೆಯಲ್ಲಿ ಸಂಸ್ಥೆಯೊಂದಿಗೆ ಕೈಜೋಡಿಸಬೇಕೆಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ ಮಾತನಾಡಿ ಸುಶಿಕ್ಷಿತ ಸಮಾಜ ಕಟ್ಟುವ ಕನಸುಗಳೊಂದಿಗೆ ಕೆ.ಪಿ.ಅಹ್ಮದ್ ಹಾಜಿಯವರು ಮೂವತ್ತು ವರ್ಷಗಳ ಹಿಂದೆ ಕಟ್ಟಿದ ಈ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇದು ಹೆಮ್ಮೆಯ ವಿಷಯವಾಗಿದೆ ಎಂದರು. ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ಝುಲೈಖಾಬಿ ಪ್ರಸಕ್ತ ಸಾಲಿನ ಶೈಕ್ಷಣಿಕ ಮಾಹಿತಿಯನ್ನು ನೀಡಿದರು. ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಇಲ್ಯಾಸ್, ಸಾಲ್ಮರ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ, ಅಸ್ವಾಲಿಹಾ ಶರೀಅ ಕಾಲೇಜ್ ನ ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಮೊದಲಾದವರು ಮಾತನಾಡಿದರು. ಶಾಲಾ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಕ್ಷಕ-ಶಿಕ್ಷಕ ಸಂಘಗಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಾಲ್ಮರ ಪ್ರೌಢಶಾಲೆಯ ಮುಖ್ಯಸ್ಥೆ ಮೋಹನಾಂಗಿ ಸ್ವಾಗತಿಸಿದರು. ಶಿಕ್ಷಕರಾದ ರವೂಫ್ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಶ್ರಫ್ , ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಕೂಟತ್ತಾನ ಮತ್ತು ಅಬ್ದುಲ್ ಹಮೀದ್ ಸಹಕರಿಸಿದರು. ಶಿಕ್ಷಕ ಮಂಜುನಾಥ ರೈ ವಂದಿಸಿದರು.