ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..!
ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ ವಿಕೋಪಗಳಿಂದಾಗಿ ನಮ್ಮ ಸುತ್ತಮುತ್ತಲು ದುರಂತಗಳು ದೈನಂದಿನವಾಗಿ ಏರುತ್ತಿವೆ, ಹೆಚ್ಚಿನ ಮಳೆ, ಭೂಮಿ,ಗುಡ್ಡ ಬೆಟ್ಟಗಳ ಕುಸಿತ, ನದಿ ಕೆರೆಗಳು ತುಂಬಿ ತುಳುಕುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ ಅಲ್ಲದೇ ಮನುಷ್ಯ ಪ್ರಾಣಿ ಸಂಕುಲಕ್ಕೆ ಹಾನಿ ಮತ್ತು ತೊಂದರೆಗಳು ಎದುರಾಗುತ್ತಿವೆ. ರಸ್ತೆಗಳು ದಾರಿ ಮನೆ ಹಾಗೂ ವಿಶಾಲ ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಜನ ಸಂಚಾರ ವಾಹನ ಚಲಾವಣೆ ಎಲ್ಲವೂ ಸಂಕಷ್ಟಕರವಾಗಿದೆ. ಎಡ ಬಿಡದೆ ಬರುವ ಮಳೆ, ವೇಗವಾಗಿ ಬೀಸುವ ಗಾಳಿ ಮನೆ ಕಟ್ಟಡಗಳಿಗೆ ಹಾಗೂ ಗಿಡ ಮರಗಳು ಧರೆಗುರುಳಿ ಉಂಟಾಗುತ್ತಿರುವ ಹಾನಿಗಳು ಎಲ್ಲವೂ ಮನುಷ್ಯ ರಲ್ಲಿ ಭಯದ ವಾತಾವರಣ ಉಂಟುಮಾಡಿದೆ.
ಜೀವನ್ಮರಣ ಹೋರಾಟದ ನಡುವೆ ಕೆಲವು ಜೀವಗಳು ಮಣ್ಣಿನಲ್ಲಿ ಮಾಯವಾಗಿ ಇನ್ನು ಕೆಲವು ಜೀವಗಳು ಮೃತವಾಗಿ. ಕಣ್ಣು ಮುಂದೆಯೇ ನೀರಿನಲ್ಲಿ ಜನ ಕೊಚ್ಚಿ ಹೋಗುವ ದೃಶ್ಯ ನಿಜಕ್ಕೂ ಭಯಾನಕರ ಸನ್ನಿವೇಶವೇ ಬಂದಾಗಿದೆ. ಇದು ದೇವರ ಪರೀಕ್ಷೆಯೋ..? ಮನುಷ್ಯ ಮಾಡಿರುವ ತಪ್ಪಿಗೆ ಶಿಕ್ಷೆಯೋ..? ದೇವನೇ ಬಲ್ಲ.
ಮನುಷ್ಯನಿಗೆ ಆರೋಗ್ಯವಂತನಾಗಿರಲು ಪರಿಸರ ಬಹಳ ಅವಶ್ಯಕ, ನಾವು ಸ್ವಚ್ಛವಾಗಿರಲು ಮತ್ತು ನಮ್ಮ ಅವಶ್ಯಕತೆಗೆ ನೀರು ಬಹಳ ಮುಖ್ಯವಾಗಿದೆ. ನಾವು ಕೆರೆ, ಬಾವಿ, ನದಿ, ಮುಂತಾದವುಗಳಿಂದ ನೀರು ಬಳಸಿಕೊಳ್ಳುತ್ತೇವೆ. ಆದರೆ ವಿಷ ವಸ್ತುಗಳು, ಕಸ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ನೀರಿಗೆ ಬಿಡುವುದು, ನೀರನ್ನು ಅಮಿತವಾಗಿ ಬಳಸುವುದು ಇವುಗಳಿಂದ ತುಂಬಾ ತೊಂದರೆಯಲ್ಲದೆ ಪರಿಸರ ನಾಶಕ್ಕೆ ಇದೂ ಕೂಡ ಕಾರಣವಾಗುತ್ತಿದೆ. ಹೆಚ್ಚುತ್ತಿರುವ ವಾಹನ ಸಂಚಾರ, ಕಾರ್ಖಾನೆಗಳು ಮುಂತಾದವುಗಳಿಂದ ವಾಯು ದೂಳು ಮಸಿ ಎಲ್ಲವೂ ಕಲುಷಿತಗೊಂಡು ವಾಯುಮಾಲಿನ್ಯ ನಿಯಂತ್ರಣ ತಪ್ಪುತ್ತಿದೆ, ಶುದ್ಧ ವಾಯು ಸಿಗದೇ ಇದರಿಂದ ರೋಗಗಳು ಹೆಚ್ಚುತ್ತಿವೆ.
ಮುಂದಿನ ನಮ್ಮ ಪೀಳಿಗೆಯು ಉಳಿಯಬೇಕಾದರೆ ನಾವು ಈಗಾಗಲೇ ಜಾಗರೂಕತೆಯಿಂದ ಇರಬೇಕಾಗಿದೆ. ಪರಿಸರ ಪ್ರಕೃತಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಮಿತವಾದ ನೀರಿನ ಬಳಕೆ, ಶುದ್ಧ ನೀರು ಬಳಸುವುದು, ತ್ಯಾಜ್ಯಗಳನ್ನು ಕಸ, ಹಾಗೂ ವಿಷ ವಸ್ತುಗಳು ನೀರಿಗೆ ಹಾಕದೇ ಇರುವುದು. ಶುದ್ಧ ಆಮ್ಲಜನಕ ಪೂರೈಕೆಗೆ ಗಿಡ ಮರ ಬೆಳೆಸುವುದು, ಕಾಡುಗಳನ್ನು ಬೆಳೆಸುವುದು, ಗಿಡ ಮರ ಕಡಿಯದಂತೆ ನೋಡಿಕೊಳ್ಳುವುದು. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವುದು ಇವುಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾದರೆ ಮಾತ್ರ ನಮ್ಮ ಪರಿಸರ ಪ್ರಕೃತಿಯನ್ನು ದುರಂತಗಳಿದ ಪಾರಾಗಿಸಲು ಸಾಧ್ಯ. ಇಲ್ಲವಾದಲ್ಲಿ ನಾವು ಮಾಡುವ ಕೃತ್ಯಕ್ಕೆ ಇನ್ನೂ ಭೀಕರತೆಯ ದುರಂತಗಳನ್ನು ಎದುರಿಸಬೇಕಾಗುತ್ತದೆ.
✍️ಹಾಶಿಂ ಬನ್ನೂರು