‘ವೈದ್ಯರು ದೇವ ಸಮಾನರು’ ಎಂಬ ಮಾತು ಮತ್ತೊಮ್ಮೆ ಸಾಬೀತಾಯಿತು
ಬರಹ: ನೂರುದ್ದೀನ್ ಸಾಲ್ಮರ ನ್ಯಾಯವಾದಿ, ಪುತ್ತೂರು
ಕಳೆದ ಜುಲೈ ತಿಂಗಳ ಭಯಾನಕ ಮಳೆ. ರಾತ್ರಿ ಸುಮಾರು ಹತ್ತು ಗಂಟೆ ಯಾಗಿತ್ತು. ಆ ದಿನ,ನನ್ನ ಸ್ನೇಹಿತನ ತಂದೆಯವರು ಅಕಾಲಿಕ ಮರಣಕ್ಕೆ ಒಳಗಾದಾಗ ಅವರನ್ನು ನೋಡಲು ನಾನು,ಪುತ್ತೂರಿನಿಂದ ದೂರದಲ್ಲಿರುವ, ಪುಣ್ಚತಾರಿಗೆ ಹೋಗಲು ಹೊರಟಿದ್ದೆ. ಮರಣ ಮನೆಗೆ ನನ್ನೊಡನೆ ಬರುತ್ತೇನೆ ಎಂದು ಹೇಳಿದ, ವ್ಯಕ್ತಿ ಒಬ್ಬರು ಬಾರದೇ ಇದ್ದಾಗ, ಆ ವ್ಯಕ್ತಿಗೆ ನಾನು ಫೋನಾಯಿಸಿದೆ. ಆ ಸಮಯದಲ್ಲಿ ಆತ,ಆತನ ಸ್ನೇಹಿತನ ಮಗುವಿಗೆ ತೀವ್ರ ಜ್ವರದ ಪರಿಣಾಮ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದರು. ಸ್ವಲ್ಪ ಹೊತ್ತು ಬಿಟ್ಟು, ನಾನು ಆ ಮಗುವಿನ ತಂದೆಗೆ ಪೋನಾಯಿಸಿ, ಮಗುವಿನ ಅನಾರೋಗ್ಯದ ಬಗ್ಗೆ ವಿಚಾರಿಸಿದಾಗ,ಆ ಮಗುವಿನ ತಂದೆ ಮಾತನಾಡದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ನಾನು ಅವರಲ್ಲಿ’ಯಾಕೆ ಅಳುತ್ತಿದ್ದೀರಿ..,?’ ಎಂದು ವಿಚಾರಿಸಿದಾಗ, ಆಗ ಅವರು,’ಎಲ್ಲಿಯೂ ಕೂಡ ಮಕ್ಕಳ ವೈದ್ಯರು ಈ ಸಮಯ ಸಿಕ್ಕುತ್ತಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಸಾಕಾಯ್ತು.ಮಗುವಿನ ಜ್ಞಾನ ಹೋಗಿದೆ. ಏನು ಮಾಡಲು ತೋಚದೆ ಅಳುತ್ತಿದ್ದೇನೆ’ ಎಂದರು. ‘ಹೆದರಬೇಡಿ’ಎಂದು ನಾನು ಅವರಿಗೆ ಧೈರ್ಯ ತುಂಬಿ, ಪುತ್ತೂರಿನ ಚೇತನ ಆಸ್ಪತ್ರೆಗೆ ಹೋಗಲು ತಿಳಿಸಿದೆನು. ನಂತರ ನಾನು,ಚೇತನ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಶ್ರೀಕಾಂತ್ ರಾವ್ ಅವರನ್ನು ಫೋನಿನ ಮೂಲಕ ಸಂಪರ್ಕಿಸಿದೆ. ಆ ಸಮಯದಲ್ಲಿ, ನನ್ನ ಕರೆಯನ್ನು ಸ್ವೀಕರಿಸಿದ ವೈದ್ಯರು, ‘ನಾನು ಈಗ ತಾನೇ ಆಸ್ಪತ್ರೆಯಿಂದ ಬಂದಿದ್ದೇನೆ. ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಗೆ ಹೋದವ, ಹಲವಾರು ಮಕ್ಕಳು, ಚಿಕಿತ್ಸೆಗಾಗಿ ಬಂದು ಕಾಯುತ್ತಿದ್ದ ಕಾರಣ, ಅವರನ್ನು ಕಾಯಿಸಲು ಮನಸು ಬಾರದೆ, ಊಟ ಮಾಡಲು ಸಮಯ ಸಿಕ್ಕಲಿಲ್ಲ. ಆದರೂ, ಎಲ್ಲಾ ಮಕ್ಕಳನ್ನು ನೋಡಿ ಈಗ ತಾನೇ ಮನೆಗೆ ಬಂದದ್ದಷ್ಟೇ’ ಎಂದರು.
ಆಗ ಸಮಯ ರಾತ್ರಿ 11 ಗಂಟೆ ಯಾಗಿತ್ತು. ಮಕ್ಕಳ ಸೇವೆ ಮಾಡಿ, ಅತ್ಯಂತ ದಣಿದಿದ್ದರೂ, ಡಾ. ಶ್ರೀಕಾಂತ ರಾಯರು, ನನ್ನಿಂದ ವಿವರವನ್ನು ಪಡೆದುಕೊಂಡರು. ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ತಿಳಿಸುವುದಾಗಿಯೂ, ಕೂಡಲೇ ಹೋಗುವುದಾಗಿಯೂ ತಿಳಿಸಿದರು. ಆ ಪ್ರಕಾರ ವೈದ್ಯರು ಆಸ್ಪತ್ರೆಗೆ ಹೋಗಿ ನೋಡಿದಾಗ ಮಗು ವಿಪರೀತ ಜ್ವರದಿಂದ ಮೂರ್ಚೆ ಕಳೆದುಕೊಂಡಿತ್ತು. ಮಗುವಿನ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಅವರನ್ನು ಸಮಾಧಾನಪಡಿಸಿ ಮಗುವಿಗೆ ಚಿಕಿತ್ಸೆ ಕೊಡಲು ಆರಂಭಿಸಿದರು. ಸತತವಾಗಿ ಮೂರು ದಿನಗಳ ಚಿಕಿತ್ಸೆಯಿಂದ, ಮಗು ಚೇತರಿಸಿದಾಗ, ಹೆತ್ತವರ ಕಳೆದು ಹೋದ ಜೀವ ಮರು ಬಂದಂತಿತ್ತು.
ಇಂತಹ ಘಟನೆಗಳು ಹಲವು ಸಲ ನಡೆದು ಹೋಗುತ್ತದೆ. ಈ ಘಟನೆಗಳಿಗೆ ನೈಜ ಸಾಕ್ಷಿಗಳಾದವರು, ಈ ಘಟನೆಯನ್ನು ಮರೆಯದೆ, ತಮ್ಮ ಜೀವನ ಪೂರ್ತಿ ಅವರ ಸೇವೆ ಮಾಡಿದವರ ನೆನಪಿನಲ್ಲಿ ಹಾಗೂ ಅವರಿಗಾಗಿ ಪ್ರಾರ್ಥಿಸುವುದರಲ್ಲಿ ಕಳೆಯುತ್ತಾರೆ. ಆದರೆ ಇಂತಹ ಸೇವೆ ಮಾಡಿದ ವೈದ್ಯರುಗಳ ಸೇವೆಯಲ್ಲಿ ಏನಾದರೂ ಸಣ್ಣ ನ್ಯೂನ್ಯತೆ ಉಂಟಾದರೂ, ಆ ವೈದ್ಯರು ಹಿಂದೆ ಮಾಡಿದ ಪುಣ್ಯದಾಯಕ ಸೇವೆಗಳನ್ನು ಮರೆಯುತ್ತಾರೆ. ಮಾತ್ರವಲ್ಲ ಸಮಾಜದಲ್ಲಿ ವಿಲನ್ ಗಳನ್ನಾಗಿ ಮಾಡುತ್ತಾರೆ. ವೈದ್ಯರು ಮನುಷ್ಯರು ತಾನೆ..?. ತಪ್ಪು ಸಂಭವಿಸುವುದು ಸಹಜ. ಆದರೆ ಯಾವುದೇ ವೈದ್ಯರು ನಾನು ತಿಳಿದುಕೊಂಡ ಮಟ್ಟಿಗೆ ಯಾವುದೇ ವ್ಯಕ್ತಿಯ ಜೀವದಲ್ಲಿ ಚೆಲ್ಲಾಟವಾಡಲಾರ. ವೈದ್ಯನಿಗೆ ಜೀವ ರಕ್ಷಿಸಲಷ್ಟೇ ಗೊತ್ತು. ಬದಲಾಗಿ ಕೊಲ್ಲಲು ಖಂಡಿತ ಗೊತ್ತಿಲ್ಲ.
ಸುಮಾರು 40 ವರ್ಷಗಳಿಂದ, ಪುತ್ತೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶ್ರೀಕಾಂತ್ ರಾಯರು, ಹೆತ್ತವರ ಪಾಲಿನ ಆಪದ್ಬಾಂಧವ. ಬೆಳಿಗ್ಗೆ ತನ್ನ ಮನೆಯಿಂದ ಹೊರಟು ಆಸ್ಪತ್ರೆ ಸೇರಿದರೆ, ಅವರಿಗೆ ಮಕ್ಕಳ ಕಾಳಜಿ ಮಾತ್ರ. ತನ್ನ ಬಳಿ ಬರುವ ಮಕ್ಕಳಿಗೆ ಚಿಕಿತ್ಸೆ ಕೊಡುವುದರಲ್ಲಿ ಯಾವಾಗಲೂ ಮುಖ ತಿರುಗಿಸಿದವರಲ್ಲ. ತನ್ನತ್ತಿರ ಚಿಕಿತ್ಸೆಗಾಗಿ,ಹಿಂದೆ ಬಂದ, ಪ್ರತಿಯೊಂದು ಮಕ್ಕಳ ಹೆಸರು ಹೇಳಿ ಕರೆಯುವ ಇವರ ನೆನಪು ಶಕ್ತಿ ಅಗಾಧ. ಮಕ್ಕಳೊಡನೆ ಇವರು ತೋರಿಸುವ ಪ್ರೀತಿ ವಿವರಿಸಲು ಅಸಾಧ್ಯ. ಹಿಂದೊಮ್ಮೆ ಅವರು ತೀವ್ರವಾದ ಕಾಲು ನೋವಿಗೆ ಒಳಗಾದರೂ, ವೀಲ್ ಚೇರ್ ಮೂಲಕ ಮಕ್ಕಳಿರುವ ಕೊಠಡಿಗೆ ಹೋಗಿ, ಅವರ ಸೇವೆ ಮಾಡಿದ ಕ್ಷಣ ನಿಜಕ್ಕೂ ಮರೆಯಲಾಗದು. ಇಂತಹ ವೈದ್ಯರು ಅಪರೂಪದಲ್ಲಿ ಅಪರೂಪ. ಪ್ರತಿಯೊಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಹೋಗಲು ಎಲ್ಲರಿಗೂ ಅಸಾಧ್ಯ. ಬಡವರ ಹಾಗೂ ಮಧ್ಯಮ ವರ್ಗದವರ ಪಾಲಿಗೆ ಪುತ್ತೂರನ್ನೇ ಮಂಗಳೂರು ಮಾಡಿದ ವೈದ್ಯ ಡಾಕ್ಟರ್ ಶ್ರೀಕಾಂತ್ ರಾಯರು. ಇವರ ನಗುಮುಖದ ಸೇವೆ, ಇನ್ನೂ ಹಲವಾರು ವರ್ಷ ಪುತ್ತೂರಿನ ಜನತೆಗೆ ಸಿಗುವಂತಾಗಲಿ. ದೇವರು ಅವರಿಗೆ ಆಯುರಾರೋಗ್ಯವನ್ನು ಕರುಣಿಸಲಿ.