ಅಂಕಣಗಳು

ರಂಝಾನ್ ಉಪವಾಸ: ಆಹಾರ ಸೇವನೆಗೆ ಮಿತಿಯಿರಲಿ… ಆರೋಗ್ಯದ ಕಡೆಗೂ ಇರಲಿ ಗಮನ



ಪವಿತ್ರ ರಂಝಾನ್ ತಿಂಗಳು ಮತ್ತೊಮ್ಮೆ ಆಗಮನವಾಗಿದೆ. ರಂಝಾನ್‌ನಲ್ಲಿ ಉಪವಾಸ ಮಾಡುವುದರ ಜೊತೆಗೆ ಇನ್ನಿತರ ಅನೇಕ ವಿಚಾರಗಳ ಬಗ್ಗೆಯೂ ನಾವು ಗಮನ ಹರಿಸಬೇಕಾದದ್ದು ಅತೀ ಅಗತ್ಯ. ಉಪವಾಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಸಮಚಿತ್ತದಿಂದ ಇರುವಂತೆ ಪ್ರೇರೇಪಿಸುತ್ತದೆ. ರಂಝಾನ್ ತಿಂಗಳು ಸತ್ಕರ್ಮಗಳನ್ನು ಹೆಚ್ಚಿಸಲು ಇರುವ ಮಾಸವೇ ಹೊರತು ಆಹಾರ ಪಾನೀಯಗಳನ್ನು ಬೇಕಾಬಿಟ್ಟಿ ಸೇವಿಸಲು ಇರುವ ಮಾಸ ಅಲ್ಲ ಎನ್ನುವುದನ್ನು ಪ್ರತಿಯೋರ್ವ ಉಪವಾಸಿಗನೂ ತಿಳಿದುಕೊಳ್ಳಬೇಕಾಗಿದೆ.

ರಂಜಾನ್ ತಿಂಗಳಿನಲ್ಲಿ ನಮ್ಮ ಮನಸ್ಸು ಮತ್ತು ಹೃದಯವನ್ನು ಶುದ್ದೀಕರಿಸುವುದಕ್ಕಾಗಿ ಹೆಚ್ಚು ಇಬಾದತ್ ಮಾಡಬೇಕು. ನಮಾಜು, ಖುರ್ ಆನ್ ಪಾರಾಯಣ, ದಿಕ್ರ್, ಸ್ವಲಾತ್, ಸತ್ಕರ್ಮಗಳನ್ನು ಅಧಿಕಗೊಳಿಸಬೇಕು. ಒಳಿತಿಗೆ ದುಪ್ಪಟ್ಟು ಪ್ರತಿಫಲ ಸಿಗುವ ಈ ಮಾಸದ ಸಂಪೂರ್ಣ ಲಾಭವನ್ನು ನಾವು ಪಡೆಯದೆ ಹೋದರೆ ನಮಗಿಂತ ನತದೃಷ್ಟರು ಯಾರೂ ಇಲ್ಲ.

ಇಂದು ರಂಝಾನ್ ತಿಂಗಳಿನಲ್ಲಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸುವುದು ಮತ್ತು ಅದನ್ನು ತಿನ್ನುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ವಾಸ್ತವದಲ್ಲಿ ರಂಝಾನ್ ತಿಂಗಳಲ್ಲಿ ಇಬಾದತ್‌ಗೆ ಹೆಚ್ಚು ಮಹತ್ವ ಕೊಡಬೇಕೇ ವಿನಃ ಆಹಾರಕ್ಕಲ್ಲ. ಉಪವಾಸ ವೃತ ಕೈಗೊಂಡವರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕಾಗಿದೆ. ಉಪವಾಸ ತೊರೆಯುವ ಸಂದರ್ಭ ಹೆಚ್ಚು ಕೋಲ್ಡ್ ಆಗಿರುವ ನೀರು, ಶರಬತ್, ಜ್ಯೂಸ್‌ಗಳನ್ನು ಕುಡಿಯಬಾರದು. ಸಕ್ಕರೆ ಅಂಶ ಹಾಗೂ ಆಯಿಲ್ ಅಂಶವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಆರೋಗ್ಯದ ಕಡೆ ಹೆಚ್ಚಿನ ನಿಗಾ ಇಡುವುದು ಅವಶ್ಯಕವಾಗಿದೆ.

ಇನ್ನು ರಂಜಾನ್ ತಿಂಗಳಲ್ಲಿ ಒಂದು ತಿಂಗಳು ಫುಡ್ ಕಂಟ್ರೋಲ್ ಮಾಡಿದ್ದನ್ನು ವರ್ಷಪೂರ್ತಿ ಕಂಟ್ರೋಲ್ ಮಾಡಲು ಪ್ರಯತ್ನಿಸಬೇಕು. ಇದರಲ್ಲಿ ಮನೆಯ ಮಹಿಳೆಯರ ಪಾತ್ರ ಪ್ರಧಾನವಾಗಿದ್ದು ಅವರು ಮನಸ್ಸು ಮಾಡಿದರೆ ಅದನ್ನು ಸಾಧಿಸಿ ತೋರಿಸಬಹುದು. ಫುಡ್ ಕಂಟ್ರೋಲ್ ವಿಚಾರದಲ್ಲಿ ನಿರ್ದಿಷ್ಟ ವೇಳಾಪಟ್ಟಿ ಸಿದ್ದಪಡಿಸಿಕೊಂಡು ಅದರಂತೆ ಮುಂದುವರಿದರೆ ಆರೋಗ್ಯ ಕಾಪಾಡಲು ಬಹು ಉಪಕಾರಿ.

ಒಟ್ಟಿನಲ್ಲಿ ರಂಝಾನ್ ತಿಂಗಳನ್ನು ಸತ್ಕರ್ಮಗಳಿಂದ ಧನ್ಯಗೊಳಿಸಬೇಕು. ಅನವಶ್ಯಕ ಮಾತು, ವಿಚಾರಗಳಿಂದ ದೂರ ಇರಬೇಕು. ರಂಝಾನ್ ಮಾಸವನ್ನು ಬದಲಾವಣೆಯ ಮಾಸವಾಗಿ ಪರಿವರ್ತಿಸಬೇಕು. ಆಹಾರ, ಪಾನೀಯ ಸೇವನೆಗೆ ಮಹತ್ವ ಕಡಿಮೆ ಮಾಡಿ ಇಬಾದತ್ ಗೆ ಹೆಚ್ಚಿನ ಸಮಯ ಮೀಸಲಿಡಬೇಕು.

ಎಲ್ಲರಿಗೂ ರಂಝಾನ್ ನಲ್ಲಿ ಹೆಚ್ಚೆಚ್ಚು ಸತ್ಕರ್ಮಗಳನ್ನು ಮಾಡಲು ಸರ್ವಶಕ್ತನು ಅನುಗ್ರಹಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ ಎಲ್ಲರಿಗೂ ರಂಝಾನ್ ಶುಭಾಶಯಗಳು.                                                                                 -ಅಮ್ಜದ್ ಖಾನ್, ಪೋಳ್ಯ, ಅಧ್ಯಕ್ಷರು ಕಮ್ಯೂನಿಟಿ ಸೆಂಟರ್

Leave a Reply

Your email address will not be published. Required fields are marked *

error: Content is protected !!