ಕರಾವಳಿ

ಬೆಳ್ತಂಗಡಿ: ಶೈಕ್ಷಣಿಕ ಸಮಾಲೋಚನೆ ಮತ್ತು ಪ್ರೋತ್ಸಾಹ ಕೇಂದ್ರ ‘ಉಜಿರೆ ಕಮ್ಯೂನಿಟಿ ಸೆಂಟರ್’ ಉದ್ಘಾಟನೆ

ಬೆಳ್ತಂಗಡಿ ತಾಲೂಕನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿಗೊಳಿಸುವ ಮಹತ್ವದ ಕನಸಿನೊಂದಿಗೆ ಉಜಿರೆ ಕಮ್ಯೂನಿಟಿ ಸೆಂಟರನ್ನು ನಿರ್ಮಿಸಲಾಗಿದೆ. ಭವಿಷ್ಯದ ತಲೆಮಾರಿಗೆ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಸಿಗಲು ಅವರಿಗೆ ಬೇಕಾದ ಪ್ರೇರಣೆ, ಸಲಹೆ, ಪ್ರೋತ್ಸಾಹ ಮತ್ತು ಅವಕಾಶಗಳನ್ನು ಕಮ್ಯೂನಿಟಿ ಸೆಂಟರ್ ಒದಗಿಸಲಿದೆ ಎಂದು ಅನಿವಾಸಿ ಉಧ್ಯಮಿ,ವೆಲ್ಡನ್ ಅರೇಭಿಯಾ ಕಂಪೆನಿಯ ಮಾಲಕರಾದ ಶಾಹುಲ್ ಹಮೀದ್ ಉಜಿರೆ ಹೇಳಿದರು.

ಉಜಿರೆಯ ಟಿ.ಬಿ ರೋಡ್ ನಲ್ಲಿರುವ ತನ್ನ ಸ್ವಂತ ಕಟ್ಟಡ ಶಮಾ ಕಾಂಪ್ಲೆಕನ್ನು ಕಮ್ಯೂನಿಟಿ ಸೆಂಟರಿನ ಶೈಕ್ಷಣಿಕ ಸೇವೆಗಾಗಿ ದಾನ ನೀಡಿದ ಶಾಹುಲ್ ಹಮೀದ್ ರವರು ನನ್ನೂರಿನ ಮಕ್ಕಳ ಭವಿಷ್ಯಕ್ಕೆ ಈ ಸೆಂಟರ್ ಬೆಳಕಾಗಲಿ ಎಂದು ಹಾರೈಸಿದರು. ಉಜಿರೆ ಕಮ್ಯೂನಿಟಿ ಸೆಂಟರನ್ನು ಶಾಹುಲ್ ಹಮೀದ್ ರವರ ಹಿರಿಯ ಮಗಳು ಸಲ್ವಾ ಶಿರೀನ್ ಮತ್ತು ವೈಟ್ ಸ್ಟೋನ್ ನ ಮಾಲಕರಾದ ಬಿ.ಎಂ.ಶರೀಫ್ ಜೋಕಟ್ಟೆ ಅವರು ಉದ್ಟಾಟಿಸಿದರು. ಮುಂದಿನ ಪೀಳಿಗೆಗೆ ಮತ್ತು ಸಮಾಜಕ್ಕೆ ನಮ್ಮ ಮಕ್ಕಳು ಮಾರ್ಗದರ್ಶಿಗಳು ಆಗಬೇಕು ಎನ್ನುವ ಉದ್ದೇಶದಿಂದ ಮಗಳು ಸಲ್ವಾ ಶಿರೀನ್ ರ ಮೂಲಕ ಸೆಂಟರ್ ಉದ್ಘಾಟಿಸಿದ್ದೇವೆ ಎಂದು ಶಾಹುಲ್ ಹಮೀದ್ ಉಜಿರೆ ಹೇಳಿದರು.

ಉಜಿರೆ ಕಮ್ಯೂನಿಟಿ ಸೆಂಟರ್ ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೇರಣಾ ಶಿಬಿರ, ಕೌನ್ಸಿಲಿಂಗ್, ಮೆಂಟರ್ ಶಿಫ್, ಪ್ರೋತ್ಸಾಹ ಕೇಂದ್ರವಾಗಿ ಕಾರ್ಯಾಚರಿಸಲಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಎಲ್ಲಾ ಧರ್ಮೀಯ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ನೆರವು ಇಲ್ಲಿ ಸಿಗಲಿದೆ. NEET, JEE, CLAT, NDA, UPSC, CAT ಮುಂತಾದ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು ಸೆಂಟರಿನ ಮಾನದಂಡಗಳು ಅನ್ವಯಿಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಿದೆ. ಕೌಶಲ್ಯ ತರಬೇತಿ, ವೃತ್ತಿ ಆಧಾರಿತ ಕೋರ್ಸ್ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ಸೆಂಟರ್ ಮಾಹಿತಿ ನೀಡಲಿದೆ. ಪ್ರತೀ ಹೆತ್ತವರು ಕಮ್ಯೂನಿಟಿ ಸೆಂಟರ್ ಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಅವರ ಶಿಕ್ಷಣದ ಗುರಿ-ದಾರಿಗೆ ಬೇಕಾದ ಸಲಹೆ ಮತ್ತು ಪ್ರೋತ್ಸಾಹ ಪಡೆಯಿರಿ ಎಂದು ಅನಿವಾಸಿ ಉಧ್ಯಮಿ ಸ್ಯಾಂಡ್ ಟೆಕ್ ನ ಸೌದಿ ಅರೇಭಿಯಾದ ಸಿ.ಇ.ಓ ಯೂನುಸ್ ಮಣಿಪಾಲ್ ಹೇಳಿದರು.

ಕಮ್ಯೂನಿಟಿ ಸೆಂಟರ್ ಕಲ್ಪನೆಯು ಶಿಕ್ಷಣದಲ್ಲಿ ಬಹಳ ಯಶಸ್ವೀ ಪ್ರಯೋಗವಾಗಿದೆ. ಹಲವು ತಾಲೂಕಿನಲ್ಲಿ ಸೆಂಟರ್ ನಿರ್ಮಾಣವಾಗಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಕಾಣುತ್ತಿದ್ದೇವೆ. ಉಜಿರೆ ಕಮ್ಯೂನಿಟಿ ಸೆಂಟರ್ ಗೆ ಶಾಹುಲ್ ಉಜಿರೆಯವರು ಇಷ್ಟೊಂದು ಸುಂದರ ಕಟ್ಟಡ ನೀಡಿರುವುದರಿಂದ ಇಲ್ಲಿಯೂ ಈ ಸೆಂಟರ್ ಯಶಸ್ವಿಯಾಗಲಿ ಎಂದು ಟೀಂ ಬಿ-ಹ್ಯೂಮನ್ ನ ಸ್ಥಾಪಕರಾದ ಆಸಿಫ್ ಡೀಲ್ಸ್ ಹಾರೈಸಿದರು.

ಜಿಲ್ಲಾ ಪಂಚಾಯತಿನ ಮಾಜಿ ಸದಸ್ಯರಾದ ಯು.ಪಿ ಇಬ್ರಾಹಿಂ ಅಡ್ಡೂರ್ ರವರು ಮಾತನಾಡಿ ಶಿಕ್ಷಣ ಕೊಡುವ ಜೊತೆ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಕೌಶಲ್ಯ ತರಬೇತಿ ಮತ್ತು ಸಾಮಾಜಿಕ ಜವಾಬ್ದಾರಿಯ ಜ್ಞಾನ ನೀಡಬೇಕು. ಆ ನಿಟ್ಟಿನಲ್ಲಿ ಕಮ್ಯೂನಿಟಿ ಸೆಂಟರ್ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. ಉಜಿರೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಬಿ.ಎಂ ಅಬ್ದುಲ್ ಹಮೀದ್ ರವರು ಮಾತನಾಡಿ ನಮ್ಮ ಊರಿನ ವಿದ್ಯಾರ್ಥಿಗಳಿಗೆ ಇದೊಂದು ಶುಭ ಸುದ್ದಿ, ನಾವೆಲ್ಲರೂ ಜೊತೆಗಿದ್ದೇವೆ ಎಂದರು.

ಸೆಂಟರಿನ ವ್ಯವಸ್ಥಾಪಕರಾಗಿ ಶಾಹುಲ್ ಹಮೀದ್ ರವರ ಸಹೋದರ ಝಾಕಿರ್ ಉಜಿರೆ, ಸೆಂಟರಿನ ನಿರ್ಧೇಶಕರಾಗಿ ದಾರುಣ್ಣೂರಿನ ಹುದವಿ ವಿದ್ಯಾರ್ಥಿ ಸ್ವಾದಿಕ್ ರವರು ಕಾರ್ಯ ನಿರ್ವಹಿಸಲಿದ್ದಾರೆ. ಪುತ್ತೂರು ಕಮ್ಯೂನಿಟಿ ಸೆಂಟರ್ ಇವರಿಗೆ ಬೇಕಾದ ಪ್ರೋತ್ಸಾಹ ಮತ್ತು ಮಾರ್ಗಸೂಚಿಗಳನ್ನು ನೀಡಲಿದೆ.

ಅಲ್-ಫಲಕ್ ನ ಸಿ.ಇ.ಒ ಅಬ್ದುಲ್ ಬಶೀರ್, ಪ್ರೊ ಸರ್ವ್ ಕಂಟ್ರಾಕ್ಟಿಂಗ್ ಸೌದಿ ಅರೇಭಿಯಾ ಇದರ ಮಾಲಕರಾದ ಅಬ್ದುಲ್ ಸತ್ತಾರ್, ಅಲ್-ನಜ್ಮಾ ಪೆಟ್ರೋಲಿಯಂ ಕಂಪೆನಿ ಸೌದಿ ಅರೇಭಿಯಾ ಇದರ ಸಿ.ಇ.ಓ ಉಸ್ಮಾನ್ ಕೊಟ್ರೊಡಿ, ಕೋಕ್ಸೋನ್ ಸೌದಿ ಅರೇಬಿಯಾದ ಜಿ.ಕೆ.ಸಲೀಂ ಮತ್ತು ಅಮೀರ್ ಹುಸೈನ್ ಗೂಡಿನಬಳಿ, ಪೆಟ್ರೋ ಸ್ಕಿಲ್ ಸೌದಿ ಅರೇಬಿಯಾ ಇದರ ಸಿ.ಇ.ಒ ಮಹಮ್ಮದ್ ಇಕ್ಬಾಲ್, ಉದ್ಯಮಿ ಇಮ್ತಿಯಾಝ್ ಗೊಲ್ಡನ್, ಇಮ್ರಾನ್ ಹೆರ್ಟ್ಸ್, ಉಮರ್ ಕುಂಞ, ಅನ್ವರ್ ಸಾದತ್ ದಮಾಮ್, ಅಬ್ದುಲ್ ರಹ್ಮಾನ್, ಝಾಕಿರ್ ಹುಸೈನ್, ಇಂಜಿನಿಯರ್ ವಿ.ಕೆ ಹಮೀದ್, ಪಿ.ಪಿ ಅಬ್ದುಲ್ ಮಜೀದ್, ಅಬುಬಕರ್ ಸುಪ್ರೀಮ್, ಅಬುಬಕರ್ ನ್ಯಾಶನಲ್ ಮೂಡಿಗೆರೆ, ಪುತ್ತೂರು ಕಮ್ಯೂನಿಟಿ ಸೆಂಟರ್ ನ ಟ್ರಸ್ಟಿಗಳಾದ ಇಮ್ತಿಯಾಝ್ ಪಾರ್ಲೆ, ನಜೀರ್ ರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!