ಕುಂಬ್ರ, ಪರ್ಪುಂಜ ಪೇಟೆಗೆ ನಿರಂತರ ವಿದ್ಯುತ್ ಸಮಸ್ಯೆ: ವರ್ತಕ ಸಂಘದಿಂದ ಮೆಸ್ಕಾಂಗೆ ಮನವಿ
ಪುತ್ತೂರು: ಕುಂಬ್ರ ಮತ್ತು ಪರ್ಪುಂಜ ಪೇಟೆಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಎದುರಾಗಿದ್ದು ವರ್ತಕರು ಕಂಗಾಲಾಗಿದ್ದಾರೆ. ಈ ಕುರಿತು ವರ್ತಕರು ಕುಂಬ್ರ ಮೆಸ್ಕಾಂ ಕಛೇರಿಗೆ ತೆರಳಿ ಸಮರ್ಪಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಮೆಸ್ಕಾಂ ಸಹಾಯಕ ಇಂಜಿನಿಯರ್ ಗುರುದೇವಿ ಮಂತ್ರಣ್ಣನವರ್‌ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕುಂಬ್ರ ಮತ್ತು ಪರ್ಪುಂಜ ಪೇಟೆಗೆ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿದ್ದು ದಿನದ 12 ಗಂಟೆಯಲ್ಲಿ ಕೇವಲ 4 ಗಂಟೆಗಳು ಮಾತ್ರ ವಿದ್ಯುತ್ ಇರುತ್ತದೆ. ವಿದ್ಯುತ್ತಿನ ಈ ರೀತಿಯ ಕಣ್ಣಾಮುಚ್ಚಾಲೆಯಿಂದ ವರ್ತಕರು ಬಹಳಷ್ಟು ಸಂಕಷ್ಟ ಪಡುತ್ತಿದ್ದಾರೆ.
ಕುಂಬ್ರ ಹಾಗೂ ಪರ್ಪುಂಜ ಪೇಟೆಯಲ್ಲಿ ಬಹಳಷ್ಟು ವಾಣಿಜ್ಯ ಸಂಕೀರ್ಣ, ಮಳಿಗೆಗಳಿದ್ದು ನಿರಂತರವಾಗಿ ವಿದ್ಯುತ್ ಕೈ ಕೊಡುತ್ತಿರುವುದರಿಂದ ವರ್ತಕರು ಕಂಗಾಲಾಗಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟು ಮನವಿ ಸಲ್ಲಿಸಲಾಯಿತು.
ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರ ನೇತೃತ್ವದಲ್ಲಿ ಹೋದ ನಿಯೋಗದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಸದಸ್ಯರುಗಳಾದ ನಿಹಾಲ್ ಶೆಟ್ಟಿ, ಸಂತೋಷ್ ಕುಮಾರ್ ಆಚಾರ್ಯ, ಅಜಿತ್ ಕುಮಾರ್ ರೈ ಉಪಸ್ಥಿತರಿದ್ದರು.