ದಾಳಿ ಮಾಡಿದ ಚಿರತೆಯನ್ನು ಕೊಂದು ಹಾಕಿದ ಗ್ರಾಮಸ್ಥರು

ರಾಯಚೂರು: ಜೂನ್.6ರಂದು ಬೆಳಗ್ಗೆ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸುತ್ತಲಿನ ಗ್ರಾಮಸ್ಥರು ಕೊಂದು ಹಾಕಿದ ಘಟನೆ ದೇವದುರ್ಗ ತಾಲೂಕಿನ ಕರಡಿಗುಡ್ಡ ಪಕ್ಕದಲ್ಲಿ ಕಂಬದಾಳ ಗ್ರಾಮದಲ್ಲಿ ನಡೆದಿದೆ.
ಗುಡ್ಡದಲ್ಲಿ ಚಿರತೆ ದಾಳಿಯಲ್ಲಿ ಮೂವರು ಗಾಯಗೊಂಡು ಬಳಿಕ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿರತೆ ದಾಳಿ ಬಳಿಕ ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಬೋನುಗಳನ್ನು ಇರಿಸಿದ್ದರು. ಅಲ್ಲದೇ ಗ್ರಾಮಗಳಲ್ಲಿ ಎಚ್ಚರಿಕೆ ನೀಡಿದ್ದರು. ಈತನ್ಮಧ್ಯೆ ಚಿರತೆ ದಾಳಿಯಿಂದ ರೊಚ್ಚಿಗೆದ್ದ ಸುತ್ತಲಿನ ಗ್ರಾಮಸ್ಥರು ಚಿರತೆ ಜಾಗ ಪತ್ತೆ ಹಚ್ಚಿ ಮನಸೊ ಇಚ್ಛೆ ಹಲ್ಲೆ ಮಾಡಿದ್ದು, ಚಿರತೆ ಪ್ರಾಣ ಕಳೆದುಕೊಂಡಿದೆ ಎಂದು ತಿಳಿದು ಬಂದಿದೆ.