ಉತ್ತರ ಪ್ರದೇಶ: ಸಚಿವರಿಗೆ ಮಹತ್ವದ ಸೂಚನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್
ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ತೀವ್ರ ಹಿನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯ ಸರ್ಕಾರದ ಸಚಿವರು ಮತ್ತು ಸಾರ್ವಜನಿಕ ಪ್ರತಿನಿಧಿಗಳಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿರುವುದಾಗಿ ವರದಿಯಾಗಿದೆ.
ಸಚಿವರು ಮತ್ತು ಸಾರ್ವಜನಿಕ ಪ್ರತಿನಿಧಿಗಗಳು
“ವಿಐಪಿ ಸಂಸ್ಕೃತಿಯನ್ನು” ಅಳವಡಿಸಿಕೊಳ್ಳಬಾರದು ಎಂದು ಅವರು ಮಹತ್ವದ ಸೂಚನೆ ನೀಡಿದ್ದಾರೆ. ನಮ್ಮ ಚಟುವಟಿಕೆಗಳು ವಿಐಪಿ ಸಂಸ್ಕೃತಿಗೆ ಪೂರಕವಾಗಿರಬಾರದು. ಆ ವಿಷಯದಲ್ಲಿ ಎಲ್ಲರೂ ಜಾಗ್ರತೆ ವಹಿಸಬೇಕು. ನೀವು ಜನರ ನಡುವೆ ಇರಬೇಕು ಎಂದಿರುವ ಯೋಗಿ ಸರ್ಕಾರವು ಜನರ ಪರವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳು, ನಿರೀಕ್ಷೆಗಳು ಮತ್ತು ಅಗತ್ಯಗಳನ್ನು ಪರಿಹರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕು, ಸರ್ಕಾರದ ನೀತಿಗಳು, ನಿರ್ಧಾರಗಳು ಮತ್ತು ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಸಿಎಂ ಆದಿತ್ಯನಾಥ್ ಹೇಳಿರುವುದಾಗಿ ವರದಿಯಾಗಿದೆ.
543 ಸ್ಥಾನಗಳ ಲೋಕಸಭೆಗೆ ಅತಿ ಹೆಚ್ಚು 80 ಸದಸ್ಯರನ್ನು ಕಳುಹಿಸುವ ದೇಶದ ಅತ್ಯಂತ ಜನಸಂಖ್ಯೆಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ. ಇಲ್ಲಿ ಬಿಜೆಪಿ ಕೇವಲ 33 ಸ್ಥಾನಗಳನ್ನು ಗೆದ್ದಿದೆ. 2014 ರಲ್ಲಿ 71 ಸ್ಥಾನ ಮತ್ತು 2019 ರಲ್ಲಿ 62 ಸ್ಥಾನ ಗೆದ್ದಿತ್ತು ಬಿಜೆಪಿ. ಮತ್ತೊಂದೆಡೆ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟ 43 ಸ್ಥಾನಗಳನ್ನು ಗೆದ್ದಿದೆ.