ಸೌಹಾರ್ದತೆ ಸಾರಿದ ಪಾಟ್ರಕೋಡಿಯ ಮುಸ್ಲಿಂ ಬಾಂಧವರು
ಪುತ್ತೂರು: ಕೆದಿಲ ಗ್ರಾಮದ ಶ್ರೀ ಉಳ್ಲಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವಕ್ಕೆ ಪಾಟ್ರಕೋಡಿಯ ಮುಸ್ಲಿಂ ಸಮುದಾಯದ ಮಂದಿ ಹಾಗೂ ಮುಸ್ಲಿಂ ಯುವ ಸಂಘಟನೆಗಳು ಶುಭಾಶಯ ಸಲ್ಲಿಸಿ ಬ್ಯಾನರ್ ಅಳವಡಿಸಿ ಹಾಗೂ ಹೊರೆ ಕಾಣಿಕೆ ಮೆರವಣಿಗೆ ವೇಳೆ ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.

ಪಾಟ್ರಕೋಡಿಯ ಮುಸ್ಲಿಂ ಸಮುದಾಯದ ಯುವಕರು, ಹಿರಿಯರು ಸೇರಿ 4-5 ಬ್ಯಾನರ್ ಅಳವಡಿಸಿ ಜಾತ್ರೋತ್ಸವಕ್ಕೆ ಶುಭ ಕೋರಿದ್ದಾರೆ. ಮಾತ್ರವಲ್ಲದೆ
ಮೆರವಣಿಗೆಯಲ್ಲಿ ಸಾಗಿದ ಭಕ್ತಾದಿಗಳಿಗೆ ಪಾಟ್ರಕೋಡಿಯಲ್ಲಿ ತಂಪು ಪಾನೀಯವನ್ನು ನೀಡಿ ಸ್ವಾಗತಿಸಿ ಭಕ್ತಾದಿಗಳ ಪ್ರಶಂಸೆಗೂ ಪಾತ್ರರಾದರು.

ಒಂದಿಲ್ಲೊಂದು ಕೋಮು ವಿಚಾರಗಳಿಂದ ಸುದ್ದಿಯಾಗುವ ಕರಾವಳಿ ಜಿಲ್ಲೆಯಲ್ಲಿ ಇಂತಹ ಸೌಹಾರ್ದಯುತ ಕಾರ್ಯಕ್ರಮ ನಡೆದಿರುವುದು ಮಾದರಿಯಾಗಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಪಾಟ್ರಕೋಡಿಯ ಮುಸ್ಲಿಂ ಬಾಂಧವರ ಈ ಸೌಹಾರ್ದತೆ ಎಲ್ಲರಿಗೂ ಮಾದರಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ಪಾಟ್ರಕೋಡಿ ತಿಳಿಸಿದ್ದಾರೆ.
