ಸುಳ್ಯ: ಸುರಂಗ ಮಾದರಿಯ ಗುಹೆ ಪತ್ತೆ
ಸುಳ್ಯ : ಜೆಸಿಬಿ ಮೂಲಕ ಅಗೆತ ಕಾಮಗಾರಿ ವೇಳೆ ಸುರಂಗ ಮಾದರಿ ಗುಹೆಯೊಂದು ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಕಲ್ಮಕಾರು ಗ್ರಾಮದ ವ್ಯಕ್ತಿಯೋರ್ವರಿಗೆ ಸೇರಿದ ಜಮೀನಿನ ರಬ್ಬರ್ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಈ ಗುಹೆ ಮಾದರಿ ಪತ್ತೆಯಾಗಿದೆ. ಜಮೀನಿನಲ್ಲಿ ಪೊದೆ, ಮುಳ್ಳುಗಳಿಂದ ಕೂಡಿದ್ದ ಜಾಗದಲ್ಲಿ ಅಗೆತ ವೇಳೆ ಸುರಂಗ ಪತ್ತೆಯಾಗಿದ್ದು, ಒಳಭಾಗ ದೊಡ್ಡ ಗಾತ್ರದ ಹಂಡೆ ಮಾದರಿಯಲ್ಲಿದೆ, ಸುಮಾರು 6 ಫೀಟ್ ಆಳವಿದೆ ಎನ್ನಲಾಗಿದೆ.
ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಣೆ ಮಾಡಿದ್ದು ತಮ್ಮದೇ ರೀತಿಯ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿನ ಶಿಲಾಯುಗದಲ್ಲಿ ಆದಿ ಮಾನವರು ಕಾಡು ಪ್ರಾಣಿಗಳಿಂದ ರಕ್ಷಿಸಲು ಇಂತಹ ಸುರಂಗ ಮಾದರಿ ಗುಹೆ ಮಾಡಿರಬಹುದು ಎನ್ನುವುದು ಕೆಲವರ ಅಭಿಪ್ರಾಯ. ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ನಿರ್ಮಿಸಲಾದ ಗುಹೆ ಆಗಿರಲೂಬಹುದು ಎನ್ನುವ ಅಭಿಪ್ರಾಯ ಇನ್ನೂ ಕೆಲವರದ್ದು. ಒಟ್ಟಿನಲ್ಲಿ ಗುಹೆ ಪತ್ತೆಯಾಗುವುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು ಅಧ್ಯಯನದಿಂದ ಮಾತ್ರ ಇದರ ಸತ್ಯಾಸತ್ಯತೆ ತಿಳಿಯಬಹುದಾಗಿದೆ.