ಬೆಂಗಳೂರು ಕಂಬಳ ವೀಕ್ಷಿಸಲು ಹರಿದು ಬಂದ ಜನ ಸಾಗರ
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ‘ಬೆಂಗಳೂರು ಕಂಬಳ ನಮ್ಮ ಕಂಬಳ’ದ ಎರಡನೇ ಹಾಗೂ ಕೊನೆಯ ದಿನವಾದ ನ.26ರಂದು ಕಂಬಳ ವೀಕ್ಷಿಸಲು ಜನ ಸಾಗರವೇ ಹರಿದು ಬಂದಿದೆ.
ಭಾನುವಾರ ರಜಾ ದಿನವಾದ ಕಾರಣ ಕಂಬಳ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ವಾಹನ ದಟ್ಟನೆ ಹೆಚ್ಚಾಗಿದ್ದರಿಂದ ಬಹಳಷ್ಟು ದೂರದಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ ಜನರು ನಡೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲಿ ನೋಡಿದರೂ ಜನವೋ ಜನ… ಮಕ್ಕಳು, ಮಹಿಳೆಯರು, ಸೇರಿದಂತೆ ಲಕ್ಷಾಂತರ ಮಂದಿ ಕಂಬಳವನ್ನು ನೋಡಿ ಕಣ್ತುಂಬಿಕೊಂಡರು. ಒಟ್ಟಾರೆಯಾಗಿ ಕರಾವಳಿಯ ಜನಪದ ಕ್ರೀಡೆ ಬೆಂಗಳೂರಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಜನ ದಟ್ಟಣೆಯ ಮಧ್ಯೆ ಹಲವಾರು ಮಂದಿ ಕಂಬಳವನ್ನು ಹತ್ತಿರದಿಂದ ನೋಡಲಾಗದೆ ಬೇಸರಗೊಂಡ ಘಟನೆಯೂ ನಡೆದಿದೆ. ಕಂಬಳದ ವೀಕ್ಷಕ ವಿವರಣೆ ಹಾಗೂ ಕೊಣಗಳು ಓಡುವ ವೇಳೆ ಜನರ ಶಿಳ್ಳೆ, ಚಪ್ಪಾಳೆ ಗಮನ ಸೆಳೆಯುತ್ತಿತ್ತು. ಕಂಬಳಕ್ಕೆ ಬಂದಿದ್ದ ಹಲವರು ಕೋಣಗಳ ಜೊತೆ ಸೆಲ್ಫಿ ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹುಲಿಕುಣಿತ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಆಹಾರ ಮೇಳದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಖಾದ್ಯಗಳನ್ನು ಸವಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಕರಾವಳಿ ಭಾಗದ ತಿನಿಸುಗಳು ಹಾಗೂ ರಾಜ್ಯದ ವಿವಿಧ ಭಾಗಗಳ ಆಹಾರಗಳೂ ಇದ್ದವು.
ಊಟದ ವ್ಯವಸ್ಥೆ ಮಾಡಲಾಗಿತ್ತು.
ಒಟ್ಟಾರೆಯಾಗಿ ಕರಾವಳಿಯ ಕಂಬಳ ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರದ ಸದ್ದು ಮಾಡಿತ್ತು. ಕರಾವಳಿಯ ಸಾಂಸ್ಕೃತಿಕ ಕ್ರೀಡೆಯನ್ನು ಬೆಂಗಳೂರಿಗೆ ಪರಿಚಯಿಸಿದ ಕಂಬಳದ ರೂವಾರಿ ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ.