ಶೋಚನೀಯ ಪರಿಸ್ಥಿತಿಯಲ್ಲಿ ಗಾಝಾದ ಜನತೆ: ವರದಿ
ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿ ನಡೆಸಲು ಶುರು ಮಾಡಿದ ಬಳಿಕ ಗಾಝಾದ ಜನರ ಜೀವನ ತತ್ತರಿಸಿ ಹೋಗಿದ್ದು, ಸಾವಿರಾರು ಮಂದಿ ಸಾವೀಗೀಡಾಗಿದ್ದು ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಬದುಕಿರುವವರ ನೆರವು ಪೂರೈಕೆಗೆ ತೊಡಕಾಗಿದೆ. ವಿಶ್ವಸಂಸ್ಥೆಯ ನೆರವು ಏಜೆನ್ಸಿಗಳು ಗಾಝಾದ ತನ್ನ ಗೋದಾಮುಗಳಿಗೆ ಈಜಿಪ್ಟ್ ಮೂಲಕ ಮಾನವೀಯ ನೆರವನ್ನು ಪೂರೈಸುತ್ತಿವೆ. ಆದರೆ ಅಲ್ಲಿನ ಶೋಚನೀಯ ಪರಿಸ್ಥಿತಿಗೆ ಇದ್ಯಾವುದೂ ಸಾಕಾಗುತ್ತಿಲ್ಲ. ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ ಎಂದು ವರದಿಯಾಗಿದೆ.
ಗಾಝಾದಲ್ಲಿ ವಿಶ್ವಸಂಸ್ಥೆಯ ಫೆಲೆಸ್ತೀನೀಯನ್ ನಿರಾಶ್ರಿತರ ಏಜೆನ್ಸಿಯ ಗೋದಾಮು ಮತ್ತು ವಿತರಣಾ ಕೇಂದ್ರಕ್ಕೆ ಸಾವಿರಾರು ಗಾಝಾ ನಿವಾಸಿಗಳು ದೈನಂದಿನ ಅಗತ್ಯದ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಎಂದು ವರದಿಯಾಗಿದೆ. ಇದು ಮೂರು ವಾರಗಳ ಯುದ್ಧದ ಪರಿಣಾಮದ ಅಲ್ಲಿನ ಜನರ ಪರಿಸ್ಥಿತಿ, ಹಸಿವು ಮತ್ತು ಹತಾಶೆಯ ಮಟ್ಟವನ್ನು ತಿಳಿಸುತ್ತಿದ್ದು, ಅಪಾಯಕಾರಿಯಾಗಿದೆ ಎಂದು ಯುಎನ್‌ಆರ್ಡಬ್ಲ್ಯೂಎ ಹೇಳಿರುವುದು ವರದಿಯಾಗಿದೆ.
ಅಲ್ಲಿಗೆ ನೇರವಾಗಿ ನೆರವು ವಿತರಣೆ ಮೊಟಕುಗೊಂಡಿದೆ ಮತ್ತು ಈಜಿಪ್ಟ್ ಮೂಲಕ ಟ್ರಕ್ ಗಳಲ್ಲಿ ಪೂರೈಕೆಯಾಗುತ್ತಿರುವ ಅಂತಾರಾಷ್ಟ್ರೀಯ ನೆರವು ಸಾಕಾಗುತ್ತಿಲ್ಲ. ಗಾಝಾಕ್ಕೆ ಇನ್ನಷ್ಟು ಮಾನವೀಯ ನೆರವು ಒದಗಿಸುವ ಪ್ರಯತ್ನ ವಿಫಲವಾಗುತ್ತಿದೆ. ಜೀವನಾವಶ್ಯಕ ವಸ್ತುಗಳಿಗೆ ಬೇಡಿಕೆ ಅಪಾರವಾಗಿದ್ದರೆ ಲಭ್ಯವಾಗಿರುವ ನೆರವಿನ ಸಾಮಗ್ರಿಗಳು ತುಂಬಾ ಕಡಿಮೆಯಾಗಿವೆ. ಇಸ್ರೇಲ್‌ನ ಬಾಂಬ್ ದಾಳಿಯಿಂದಾಗಿ ಗಾಝಾದಲ್ಲಿನ ತನ್ನ 50ಕ್ಕೂ ಅಧಿಕ ಸಿಬಂದಿ ಕೂಡ ಸಾವನ್ನಪ್ಪಿರುವುದರಿಂದ ಸೂಕ್ತ ರೀತಿಯಲ್ಲಿ ನೆರವು ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಏಜೆನ್ಸಿ ಹೇಳಿರುವುದಾಗಿ ವರದಿಯಾಗಿದೆ.