ಬಾಂಗ್ಲಾದೇಶ: ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗೆ ಮಣಿದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ
ಬಾಂಗ್ಲಾದೇಶದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಹಾಗೂ 1 ಗಂಟೆ ಅಂತಿಮ ಗಡುವು ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ಒಬೈದುಲ್ ಹಸನ್ ಅವರನ್ನು ಶೇಖ್ ಹಸೀನಾ ನೇಮಕ ಮಾಡಿದ್ದರು. ಅವರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನಿಷ್ಠಾವಂತರಾಗಿದ್ದರು ಎನ್ನಲಾಗಿದೆ. ಶೇಖ್ ಹಸೀನಾ ಅವರ ನಿರ್ಗಮನದ ನಂತರ, ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಸೇರಿದಂತೆ ಬಾಂಗ್ಲಾದೇಶದ ಅನೇಕ ಉನ್ನತ ಅಧಿಕಾರಿಗಳನ್ನು ಕಚೇರಿಯಿಂದ ಹೊರಹಾಕಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ನೇಮಕಗೊಂಡ ಒಬೈದುಲ್ ಹಸನ್ ಅವರು ಈ ಹಿಂದೆ ಯುದ್ಧ ಅಪರಾಧಗಳ ನ್ಯಾಯಮಂಡಳಿ ಪ್ರಕರಣವನ್ನು ಆಲಿಸಿದ್ದರು. ಈ ವೇಳೆ ಶೇಖ್ ಹಸೀನಾ ಅವರ ವಿರೋಧಿಗಳನ್ನು ಗಲ್ಲಿಗೇರಿಸಲು ಆದೇಶ ನೀಡಲಾಗಿತ್ತು. ಇದು ಸಾಕಷ್ಟು ಟೀಕೆಗೆ ಒಳಗಾಗಿತ್ತು. ಅಂದಿನಿಂದ ಅವರು ಶೇಖ್ ಹಸೀನಾ ಅವರ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರ ರಾಜೀನಾಮೆ ಪಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ.