ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಾ.ರೇಣುಕಾ ಪ್ರಸಾದ್
ಪುತ್ತೂರು:ಹನ್ನೆರಡು ವರ್ಷಗಳ ಹಿಂದೆ ನಡೆದಿರುವ ಸುಳ್ಯ ಕೆ.ವಿ.ಜಿ.ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ|ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಐವರು ಅಪರಾಧಿಗಳ ಪೈಕಿ ಡಾ.ರೇಣುಕಾಪ್ರಸಾದ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.ಡಾ.ರೇಣುಕಾಪ್ರಸಾದ್ ಅವರಿಗೆ ವಿಧಿಸಲಾಗಿರುವ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಅವರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಅ.17ರಂದು ಮೇಲ್ಮನವಿಯ ವಿಚಾರಣೆ ನಡೆಯಲಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸಿ ಪುತ್ತೂರು ಜಿಲ್ಲಾ ನ್ಯಾಯಾಲಯದಿಂದ ನಿರಪರಾಧಿಗಳೆಂದು ಬಿಡುಗಡೆಗೊಳಿಸಲ್ಪಟ್ಟ ಡಾ.ರೇಣುಕಾಪ್ರಸಾದ್, ಮನೋಜ್ ರೈ, ಎಚ್.ಆರ್.ನಾಗೇಶ್, ವಾಮನ್ ಪೂಜಾರಿ, ಭವಾನಿಶಂಕರ್ ಮತ್ತು ಶರಣ್ ಆಕಾಶಭವನ ಇವರುಗಳು ಅಪರಾಧಿಗಳು ಎಂದು ಹೈಕೋರ್ಟ್ ಘೋಷಿಸಿತ್ತು.ಹೈಕೋರ್ಟ್ ಆದೇಶದಂತೆ ಅ.5ರಂದು ನ್ಯಾಯಾಲಯಕ್ಕೆ ಹಾಜರಾದ ಐವರು ಆರೋಪಿಗಳಿಗೂ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.ಜೊತೆಗೆ ಡಾ.ರೇಣುಕಾ ಪ್ರಸಾದ್ ಅವರಿಗೆ 10 ಲಕ್ಷ ರೂ.ದಂಡವನ್ನೂ ವಿಧಿಸಲಾಗಿದ್ದು,ಅದನ್ನು ಕೊಲೆಗೀಡಾದ ರಾಮಕೃಷ್ಣ ಅವರ ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ.ಅಪರಾಧಿಯಾಗಿ ಘೋಷಿಸಲ್ಪಟ್ಟಿರುವ ಶರಣ್ ಆಕಾಶಭವನ್ ನ್ಯಾಯಾಲಯಕ್ಕೆ ಶರಣಾಗದೇ ಇದ್ದುದರಿಂದ ಆತನ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿಲ್ಲ.
ಡಾ.ರೇಣುಕಾಪ್ರಸಾದ್ ಸುಪ್ರೀಂ ಕೋರ್ಟ್ಗೆ: ಈ ಪ್ರಕರಣದಲ್ಲಿ ಡಾ.ರೇಣುಕಾಪ್ರಸಾದ್ ಅವರಿಗೆ ಶಿಕ್ಷೆ ವಿಧಿಸಿರುವ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆಯಾಗಿದೆ.ಅವರ ವಕೀಲರಾದ ಸಿದ್ಧಾರ್ಥ ಲೂಕ್ರಾ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದ್ದು ಈಗಾಗಲೇ ಮೇಲ್ಮನವಿಯನ್ನು ಸರ್ವೋಚ್ಛ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದ್ದು ಅ.17ರಂದು ಹಿಯರಿಂಗ್ ನಡೆಯಲಿದೆ.