ಸುಳ್ಯ : ಮನೆಯೊಳಗೆ ಬಂದ ಕಾಳಿಂಗ ಸರ್ಪ: ಟೀಪಾಯಿಯಡಿಯಲ್ಲಿದ್ದ ಕಾಳಿಂಗನನ್ನು ನೋಡಿ ಬೆಚ್ಚಿಬಿದ್ದ ಮನೆಯವರು
ಸುಳ್ಯ: ಮನೆಯೊಳಗೆ ಹಾವೊಂದು ಸೇರಿಕೊಂಡ ಪರಿಣಾಮ ಮನೆ ಮಂದಿ ಆತಂಕಕ್ಕೆ ಒಳಗಾದ ಘಟನೆ ವರದಿಯಾಗಿದೆ. ಕಾಡಿನಲ್ಲಿ ಇರಬೇಕಾದ ಬೃಹದಾಕಾರದ ಕಾಳಿಂಗ ಸರ್ಪ ಮನೆಯೊಂದರ ಟೀಪಾಯಡಿಯಲ್ಲಿ ಬೆಚ್ಚನೆ ಮಲಗಿದ್ದು ಇದನ್ನು ಕಂಡ ಮನೆಯವರು ಬೆಚ್ಚಿಬಿದ್ದ ಘಟನೆ ಸುಳ್ಯದ ಗೂನಡ್ಕ ಸಮೀಪ ಪೆಳ್ತಡಕದಲ್ಲಿ ಇಂದು ನಡೆದಿದೆ.
ಸ್ಥಳೀಯ ನಿವಾಸಿ ಸನತ್ ಎಸ್ ಪಿ ಅವರ ಮನೆಯೊಳಗೆ ಈ ಕಾಳಿಂಗ ಸರ್ಪನನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.
ಸೆ. 22ರಂದು ಮಧ್ಯಾಹ್ನ ಮನೆಯ ಟಿಪಾಯಿಯಡಿಯಲ್ಲಿ ಬುಸುಗುಟ್ಟುವ ಶಬ್ದ ಕೇಳಿತೆಂದು, ಟೀಪಾಯಿಯಡಿಯಿಂದ ಶಬ್ದ ಬರುತ್ತಿರುವುದನ್ನು ಮನೆಯವರು ಗಮನಿಸಿದ್ದು ಆಗ ಕಾಳಿಂಗ ಸರ್ಪ ಇರುವುದು ಕಂಡು ಬಂತು. ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಇಲಾಖೆಯವರು ಹಾವು ಹಿಡಿಯುವ ಸುಳ್ಯದ ಫೋಟೋಗ್ರಾಫರ್ ಮೋಹನ್ ಎಂಬುವರಿಗೆ ಈ ಮಾಹಿತಿ ನೀಡಿದ್ದು ಕೂಡಲೆ ಸ್ಥಳಕ್ಕೆ ಬಂದ ಮೋಹನ್ ರವರು ಮನೆಯೊಳಗಿದ್ದ ಹಾವನ್ನು ಹಿಡಿದು ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದು ಬಳಿಕ ಅದನ್ನು ಇಲಾಖೆಯವರು ಕಾಡಿನೊಳಗೆ ಬಿಟ್ಟಿರುವುದಾಗಿ ತಿಳಿದುಬಂದಿದೆ.