ಕರಾವಳಿ

ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು ನಮ್ಮ ಸಂಸ್ಕೃತಿಯಲ್ಲ: ಅಶೋಕ್ ರೈ



ಪುತ್ತೂರು: ಹೆತ್ತ ತಂದೆ ತಾಯಿಯನ್ನು ಆರೈಕೆ ಮಾಡದೆ , ಅವರನ್ನು ಆಶ್ರಮದಲ್ಲಿ ಹಾಕಿ ಅವರ ಸೇವೆ ಮಾಡುವ ಭಾಗ್ಯವಿಲ್ಲದ ಮಂದಿ ಎಷ್ಟೇ ದೊಡ್ಡ ಪುಣ್ಯದ ಕೆಲಸ ಮಾಡಿದರೂ ಆತನಿಗೆ ದೇವರು ಖಂಡಿತವಾಗಿಯೂ ಒಲಿಯವುದಿಲ್ಲ ಮತ್ತು ಆತನಿಗೆ ದೇವರ ಆಶೀರ್ವಾದ ಪಡೆಯಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹೊಟ್ಟೆಗೆ ತುತ್ತು ಇಲ್ಲದೇ ಇದ್ದರೂ ನಮ್ಮನ್ನು ಹೆತ್ತು ಸಾಕಿದ, ವಿದ್ಯೆ ಕೊಡಿಸಿದ ತಂದೆ ತಾಯಿಯೇ ನಮಗೆ ನಿಜವಾದ ದೇವರು. ಮನೆಯೊಳಗೆ ಜೀವಂತವಾಗಿರುವ ದೇವರ ಆಶೀರ್ವಾದ ಪಡೆಯದೆ ನಾವು ಎಷ್ಟು ಸಮಾಜ ಸೇವೆ ಮಾಡಿದರೂ ಏನೂ ಫಲವಿಲ್ಲ. ವಿದ್ಯೆ ಕಲಿತು ದೊಡ್ಡ ವ್ಯಕ್ತಿಗಳಾದ ನಾವು ಬಳಿಕ ತಂದೆ ತಾಯಿಯನ್ನು ಮರೆತು ಬಿಡುತ್ತೇವೆ, ಅವರು ನಮಗೆ ಮಾಡಿದ ತ್ಯಾಗವನ್ನು ಗ್ರಹಿಸುವ ಶಕ್ತಿಯೂ ನಮಗೆ ಇರುವುದಿಲ್ಲ. ಮುದಿ ಪ್ರಾಯದಲ್ಲಿ ಅವರನ್ನು ನಾವು ಆಶ್ರಮಕ್ಕೆ ಸೇರಿಸಿ ಸುಖ ಜೀವನ ನಡೆಸುತ್ತಿದ್ದೇವೆ ಇದು ಖಂಡಿತವಾಗಿಯೂ ಯಾವ ದೇವರಿಗೂ ಇಷ್ಟವಾಗುವುದಿಲ್ಲ ಎಂಬುದನ್ನು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ತಂದೆ ತಾಯಿಯನ್ನು ದೂರ ಮಾಡುವ ಸಂಸ್ಕಾರ ನಮ್ಮದಲ್ಲ, ಅದು ಭಾರತೀಯ ಸಂಸ್ಕೃತಿಯೂ ಅಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಧಾಕರ ರಾವ್ ಆರ್ಯಾಪು, ಕಬಕ ಸರಕಾರಿ ಶಾಲೆಯ ಮುಖ್ಯ ಗುರು ಬಾಬು, ಕುಂಬ್ರ ದುರ್ಗಾ ಪ್ರಸಾದ್ ರೈ, ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಎಂ ಎಸ್ ಕೇಶವ ಶಾಂತಿವನ, ರಾಮಯ್ಯ ಗೌಡ ಬೊಳ್ಳಾಡಿ, ರಾಜೇಶ್ ರೈ ಪರ್ಪುಂಜ, ಮಾಧವ ರೈ ಕುಂಬ್ರ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!