ಚೈತ್ರಾ ಕುಂದಾಪುರ ವಂಚನೆ ಕೇಸ್: ವಿಚಾರಣೆಗೆ ಹಾಜರಾಗಲು ಸೂಚಿಸಿದ ಸಿಸಿಬಿ ಪೊಲೀಸ್
ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಮತ್ತು ಟೀಂ ಕೋಟ್ಯಾಂತರ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಗೋವಿಂದ ಪೂಜಾರಿಯ ಸಂಪೂರ್ಣ ಹಣದ ವಿವರ ಬಗ್ಗೆ ಸಿಸಿಬಿ ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದು, ಹಣದ ಆದಾಯ ಮೂಲದ ಬಗ್ಗೆಯೂ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ. ನಾನು ಸಾಲ ಮಾಡಿ ಹಣ ಕೊಟ್ಟಿದ್ದೇನೆ ಎಂದು ಈಗಾಗಲೇ ಗೋವಿಂದ ಪೂಜಾರಿ ತಿಳಿಸಿದ್ದಾರೆ ಎನ್ನಲಾಗುತ್ತಿದೆಯಾದರೂ ಈ ಕುರಿತಾಗಿಯೂ ಸಿಸಿಬಿ ಪೊಲೀಸರು ತನಿಖೆ ನಡೆಸಲಿದ್ದು, ಬ್ಯಾಂಕ್ ನಿಂದ ಆ ಸಾಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ನಗದು ರೂಪದಲ್ಲಿ ಹಣ ನೀಡಿರುವ ಹಿನ್ನೆಲೆ ಈ ಎಲ್ಲಾ ಮಾಹಿತಿ ನೀಡಿಬೇಕಿದೆ. ಎಲ್ಲಾ ದಾಖಲಾತಿಗಳನ್ನ ಸಲ್ಲಿಸುವಂತೆ ಸಿಸಿಬಿ ಪೊಲೀಸರು ಗೋವಿಂದ ಬಾಬುಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದೀಗ ಗೋವಿಂದ ಬಾಬು ಪೂಜಾರಿ ಅವರೂ ಸಂಕಷ್ಟಕ್ಕೆ ಸಿಲುಕುತ್ತಾರೆಯೇ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿದೆ.