ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಗ್ರಾ.ಪಂ

ಪುತ್ತೂರು: ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯೋರ್ವರನ್ನು ನರಿಮೊಗರು ಗ್ರಾ.ಪಂ.ನಿಂದ ಪತ್ತೆ ಹಚ್ಚಿ ಅದೇ ವ್ಯಕ್ತಿಯಿಂದ ತ್ಯಾಜ್ಯವನ್ನು ಹೆಕ್ಕಿಸಿ ಬಳಿಕ ದಂಡ ವಿಧಿಸಿದ ಘಟನೆ ಅ. 19ರಂದು ನಡೆದಿದೆ.
ಮುಕ್ವೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಹಸ್ನೆನ್ ಎಂದು ಗುರುತಿಸಲಾಗಿದೆ.
ಹಸ್ನೆನ್ ಅವರು ತ್ಯಾಜ್ಯ ಎಸೆಯುತ್ತಿರುವುದನ್ನು ನರಿಮೊಗರು ಗ್ರಾಪಂ ಸದಸ್ಯ ಕೇಶವ ಅವರು ನೋಡಿದ್ದು ಅವರು ತಕ್ಷಣ ನರಿಮೊಗರು ಗ್ರಾ.ಪಂ ಪಿಡಿಓ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ತಕ್ಷಣವೇ ಸ್ಥಳಕ್ಕೆ ಬಂದ ಪಿಡಿಓ ರವಿಚಂದ್ರ ಅವರು
ತ್ಯಾಜ್ಯ ಎಸೆದ ವ್ಯಕ್ತಿಯನ್ನು ವಿಚಾರಿಸಿ ಎಚ್ಚರಿಕೆ ನೀಡಿದ್ದಲ್ಲದೇ ಎಸೆದ ತ್ಯಾಜ್ಯವನ್ನು ಶುಚಿಗೊಳಿಸಿ ದಂಡ ಕಟ್ಟುವಂತೆ ಸೂಚನೆ ನೀಡಿದರು.
ಈ ವೇಳೆ ಹಸ್ನೆನ್ ಅವರು ತ್ಯಾಜ್ಯವನ್ನು ಸ್ಥಳದಿಂದ ತೆರವುಗೊಳಿಸಲು ನಿರಾಕರಿಸಿದರು. ಈ ವೇಳೆ ಪಿಡಿಒ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಎಎಸ್ಐ ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ಆಗಮಿಸಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ವಿಚಾರಿಸಿ ಎಚ್ಚರಿಕೆ ನೀಡಿ ಬಳಿಕ ಅದೇ ವ್ಯಕ್ತಿಯಲ್ಲಿ ತ್ಯಾಜ್ಯವನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ನಂತರ ಪಿಡಿಒ ಅವರು ತ್ಯಾಜ್ಯ ಎಸೆದ ವ್ಯಕ್ತಿಗೆ ರೂ.2,000 ದಂಡ ವಿಧಿಸಿದರು. ಕಾರ್ಯಾಚರಣೆಯಲ್ಲಿ ಗ್ರಾ.ಪಂನ ಇನ್ನೋರ್ವ ಸದಸ್ಯ ಗಣೇಶ್ ಮುಕ್ವೆ ಸಹಕರಿಸಿದ್ದರು.