ಕರಾವಳಿಕ್ರೈಂ

ಕಬಕ: ತಡರಾತ್ರಿ ಹೋಟೆಲ್ ಮುಚ್ಚಿಸಲು ಹೋದ ಪೊಲೀಸರೊಂದಿಗೆ ವಾಗ್ವಾದ; ವ್ಯಕ್ತಿಯ ವಿರುದ್ಧ ಕಾನೂನು ಕ್ರಮ


ಪುತ್ತೂರು: ನಿಗದಿತ ಸಮಯ ಮುಗಿದರೂ ನಿಯಮಬಾಹಿರವಾಗಿ ತೆರೆದಿದ್ದ ಹೋಟೆಲ್ ಮುಚ್ಚಿಸಲು ಹೋದ ಪೊಲೀಸ್ ಸಿಬ್ಬಂದಿಯೊಂದಿಗೆ ಸಾರ್ವಜನಿಕರೊಬ್ಬರು ವಾಗ್ವಾದ ನಡೆಸಿದ ಘಟನೆ ಕಬಕ ಜಂಕ್ಷನ್ ಬಳಿ ನಡೆದಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮ ವರದಿ (PAR) ದಾಖಲಿಸಲಾಗಿದೆ.


ಘಟನೆಯ ವಿವರ:
ಜೂನ್ 18ರಂದು ರಾತ್ರಿ ಸುಮಾರು 10.30ರ ವೇಳೆಗೆ ಪುತ್ತೂರು ನಗರ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಚಂದ್ರ ಮತ್ತು ಸಿಬ್ಬಂದಿ ಅಸ್ತಮ್ ಗಸ್ತು ನಿರತರಾಗಿದ್ದಾಗ, ಕಬಕ ಜಂಕ್ಷನ್ ಬಳಿ ಮೊಹಮ್ಮದ್ ಆಸೀಫ್ ಎಂಬವರ ಮಾಲೀಕತ್ವದ ‘K S Alfha Corner’ ಹೋಟೆಲ್ ತೆರೆದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರು ನಿಗದಿತ ಸಮಯದೊಳಗೆ ಹೋಟೆಲ್ ಮುಚ್ಚುವಂತೆ ಸಿಬ್ಬಂದಿಗೆ ತಿಳುವಳಿಕೆ ನೀಡಿ ತೆರಳಿದ್ದಾರೆ.
ಆದರೆ, ತಡರಾತ್ರಿ 1.30 ಗಂಟೆಯ ಸುಮಾರಿಗೆ ಉಪವಿಭಾಗದ ರಾತ್ರಿ ಗಸ್ತು ಅಧಿಕಾರಿಯಾಗಿದ್ದ ಪಿ.ಎಸ್.ಐ ಸುರೇಶ್ ಅವರೊಂದಿಗೆ ಪೊಲೀಸರು ಅದೇ ಸ್ಥಳಕ್ಕೆ ಭೇಟಿ ನೀಡಿದಾಗ, ಹೋಟೆಲ್ ಇನ್ನು ಕೂಡ ಮುಚ್ಚದೇ ಇರುವುದು ಪತ್ತೆಯಾಗಿದೆ. ಅಲ್ಲದೆ ಹೋಟೆಲ್ ಬಳಿ ಮೂವರು ಗ್ರಾಹಕರು ಕುಳಿತಿರುವುದು ಕಂಡುಬಂದಿದೆ.

 


ಪೊಲೀಸರೊಂದಿಗೆ ವಾಗ್ವಾದ:
ಪರವಾನಗಿ ಅವಧಿ ಮುಗಿದ ಬಳಿಕವೂ ಅನಧಿಕೃತವಾಗಿ ಹೋಟೆಲ್ ತೆರೆದಿದ್ದಕ್ಕೆ ಪೊಲೀಸರು ತಕ್ಷಣವೇ ವ್ಯಾಪಾರ ಬಂದ್ ಮಾಡುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಹೋಟೆಲ್‌ನಲ್ಲಿದ್ದ ಗ್ರಾಹಕರ ಪೈಕಿ, ಕಬಕ ನಿವಾಸಿ ಉಜ್ವಲ್ ಕುಮಾರ್ ಪ್ರಭು (45) ಎಂಬಾತನು ಪೊಲೀಸರ ಕ್ರಮಕ್ಕೆ ತಕರಾರು ತೆಗೆದಿದ್ದಾನೆ. ಪಾನಮತ್ತನಾಗಿದ್ದ ಎನ್ನಲಾದ ಈತ ಗಸ್ತು ನಿರತ ಪೊಲೀಸರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾನೆ. ಈ ಇಡೀ ಘಟನೆಯನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಳಿಕ ಪಿ.ಎಸ್.ಐ ಸುರೇಶ್ ಅವರು ಆತನಿಗೆ ಕಾನೂನು ತಿಳುವಳಿಕೆ ನೀಡಿ ಹೋಟೆಲ್ ಮುಚ್ಚಿಸಿ ಅಲ್ಲಿಂದ ಕಳುಹಿಸಿದ್ದಾರೆ.


ಹಳೆಯ ಅಪರಾಧ ಹಿನ್ನೆಲೆ – ವ್ಯಕ್ತಿಯ ವಿರುದ್ಧ ಕೇಸ್:
ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಉಜ್ವಲ್ ಕುಮಾರ್ ಪ್ರಭು ವಿರುದ್ಧ ಈ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ 2 ಪ್ರಕರಣಗಳು ದಾಖಲಾಗಿವೆ. ಇದೀಗ ಕರ್ತವ್ಯನಿರತ ಪೊಲೀಸರೊಂದಿಗೆ ಗಲಾಟೆ ಮಾಡಿದ್ದಕ್ಕಾಗಿ ಆತನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಮುಂಜಾಗ್ರತಾ ಕ್ರಮ ವರದಿ (Preventive Action Report – PAR No: 127/2026) ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ಸಕಾಲದಲ್ಲಿ ಮಾಹಿತಿ ನೀಡದೇ, ಪರಿಸ್ಥಿತಿಯನ್ನು ವೃತ್ತಿಪರವಾಗಿ ನಿರ್ವಹಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಗಸ್ತು ಅಧಿಕಾರಿಯಾಗಿದ್ದ ಪಿ.ಎಸ್.ಐ ಸುರೇಶ್ ಅವರಿಗೆ ಇಲಾಖೆಯ ವತಿಯಿಂದ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!