ಕರಾವಳಿಕ್ರೈಂ

ಮಂಗಳೂರು: ಚಿನ್ನಾಭರಣ ಕಳವು ಪ್ರಕರಣ: ಆರೋಪಿಯ ಬಂಧನ



ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟುವಿನಲ್ಲಿ ಮಹಿಳೆಯರಿಬ್ಬರ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಸೋಮವಾರ ಬಂಧಿಸಿರುವುದಾಗಿ ವರದಿಯಾಗಿದೆ.



ಕಾಟಿಪಳ್ಳದ ನಿವಾಸಿ ಮುಹಮ್ಮದ್ ಅಬ್ದುಲ್ ಜಾಫರ್ (28) ಬಂಧಿತ ಆರೋಪಿ. ಜೂ.26ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಚೊಕ್ಕಬೆಟ್ಟು ಅಝಾದ್ ನಗರದ 2ನೇ ಬ್ಲಾಕ್‌ನಲ್ಲಿರುವ ಜಾಹಿದ ಎಂಬವರು ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಆರೋಪಿಯು ಕಿಟಕಿಯ ಮೂಲಕ ಕೈ ಹಾಕಿ ಜಾಹಿದರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಗರಿಸಲು ಯತ್ನಿಸಿದ್ದನು. ಈ ವೇಳೆ ಸರ ತುಂಡಾಗಿದ್ದು, ಸುಮಾರು 20,000 ರೂ. ಮೌಲ್ಯದ ಚಿನ್ನದ ಸರದ ತುಂಡನ್ನು ಆರೋಪಿ ಎಗರಿಸಿಕೊಂಡು ಪರಾರಿಯಾಗಿದ್ದನೆನ್ನಲಾಗಿದೆ.

 



ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜೂ.27ರಂದು ಇನ್ನೊಂದು ಕಳವು ಪ್ರಕರಣದಲ್ಲಿ ಚೊಕ್ಕಬೆಟ್ಟು 8ನೇ ಬ್ಲಾಕ್‌ ನಿವಾಸಿ ಫಯಾಝ್ ಎಂಬವರು ಮುಂಜಾನೆ 5 ಗಂಟೆ ಸುಮಾರಿಗೆ ಮಸೀದಿಗೆ ಪ್ರಾರ್ಥನೆಗೆಂದು ತನ್ನ ಮನೆಯ ಬಾಗಿಲನ್ನು ಮುಚ್ಚಿ ಹೋಗಿದ್ದರು. ಅದೇ ವೇಳೆ ಆರೋಪಿ ಬಾಗಿಲು ತೆರೆದು ಒಳ ಪ್ರವೇಶಿಸಿ ಕೋಣೆಯಲ್ಲಿ ಮಲಗಿದ್ದ ಅಫ್ರೀನಾ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದಾಗ ಚಿನ್ನದ ಸರ ತುಂಡಾಗಿದ್ದು, ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಎಗರಿಸಿಕೊಂಡು ಪರಾರಿಯಾಗಿದ್ದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಎರಡೂ ಪ್ರಕರಣಗಳ ತನಿಖೆ ಕೈಗೆತ್ತಿಕೊಂಡ ಸುರತ್ಕಲ್ ಪೊಲೀಸರು ಆರೋಪಿಯ ಮಾಹಿತಿ ಕಲೆ ಹಾಕಿ ಮಂಗಳೂರು ನಗರದ ಸ್ಟೇಟ್‌ ಬ್ಯಾಂಕ್ ಬಳಿ ಚಿನ್ನಾಭರಣಗಳ ಸಹಿತವಾಗಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯಿಂದ ಎರಡೂ ಪ್ರಕರಣಕ್ಕೆ ಸಂಬಂಧಿ ಸಿದ ಎಲ್ಲಾ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಆರೋಪಿ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆ ಮತ್ತು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಎರಡು ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!