ಕರಾವಳಿಕ್ರೈಂ

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ದರೋಡೆ, ಕಾರು ಸಹಿತ 180 ಗ್ರಾಂ ಚಿನ್ನ ದೋಚಿದ ದರೋಡೆಕೋರರ ತಂಡ

ಮಂಗಳೂರು: ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ಏಳು ಮಂದಿ ದುಷ್ಕರ್ಮಿಗಳ ತಂಡ, ಕಾರಿನಲ್ಲಿದ್ದ ಪತ್ನಿ ಮತ್ತು ಮಗನನ್ನು ಅಪಹರಿಸಿ, ಕಾರು ಹಾಗೂ 180 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿರುವ ಘಟನೆ ಜೂನ್ 28ರ ಮಧ್ಯ ರಾತ್ರಿ ಬೈಕಂಪಾಡಿಯಲ್ಲಿ ನಡೆದಿದೆ.




ದರೋಡೆಗೊಳಗಾದವರನ್ನು ಕೇರಳದ ಪಯ್ಯನ್ನೂರಿನ ನಿವಾಸಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜ್ಯುವೆಲ್ಲರಿ ಅಂಗಡಿ ಹೊಂದಿರುವ ವಿಕಾಸ್ ಎಂದು ಗುರುತಿಸಲಾಗಿದೆ. ವಿಕಾಸ್ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಸಾಂಗ್ಲಿಯಿಂದ ಪಯ್ಯನ್ನೂರಿಗೆ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದಾಗ, ಮುಂಜಾನೆ 2:15ರ ಸುಮಾರಿಗೆ ಈ ಘಟನೆ ನಡೆದಿದೆ.

 



ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜಂಕ್ಷನ್‌ನ ದ್ವಾರಾ ಹೋಟೆಲ್ ಬಳಿ ತಲುಪುತ್ತಿದ್ದಂತೆ, ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಕಾಸ್ ಅವರ ಕಾರಿಗೆ ಅಡ್ಡಗಟ್ಟಿದ್ದಾರೆ. ನಂತರ, ಬಲವಂತವಾಗಿ ವಿಕಾಸ್ ಅವರನ್ನು ಕಾರಿನಿಂದ ಹೊರಹಾಕಿದ ದರೋಡೆಕೋರರು, ಅವರ ಪತ್ನಿ ಮತ್ತು ಮಗನಿದ್ದ ಕಾರನ್ನೇ ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.


ದುಷ್ಕರ್ಮಿಗಳು ಪಣಂಬೂರು ಬೀಚ್ ರಸ್ತೆಯ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿ, ಕಾರಿನಲ್ಲಿದ್ದ 180 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ. ಆದರೆ, ಮಹಿಳೆ ಧರಿಸಿದ್ದ ಚಿನ್ನದ ಸರವನ್ನು ದರೋಡೆಕೋರರು ದೋಚಿಲ್ಲ. ಬಳಿಕ ತಾಯಿ ಮತ್ತು ಮಗನನ್ನು ರಸ್ತೆಯ ಬದಿಯಲ್ಲಿ ಬಿಟ್ಟು, ಕಾರಿನೊಂದಿಗೆ ಪರಾರಿಯಾಗಿದ್ದಾರೆ.


ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಸುಳಿವುಗಳು ಸಿಕ್ಕಿದ್ದು, ಆರೋಪಿಗಳ ಪತ್ತೆ ಹಾಗೂ ಕಳುವಾದ ವಾಹನ ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳಲು ಪೊಲೀಸ್ ತಂಡಗಳು ತೀವ್ರ ತನಿಖೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!