ಉಡುಪಿ: ವಿಡಿಯೋ ಪ್ರಕರಣ-ಪೊಲೀಸರು ಕಾನೂನು ಪ್ರಕಾರ ಕಾರ್ಯ ನಿರ್ವಹಿಸಿದ್ದಾರೆ -ಖುಷ್ಬೂ
ಉಡುಪಿ: ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಉಡುಪಿಗೆ ಭೇಟಿ ನೀಡಿದ್ದು ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರ ಜೊತೆ ಸಭೆ ಮಾಡಿ ಮಾಹಿತಿ ಪಡೆದುಕೊಂಡರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಖುಷ್ಬೂ ಸುಂದರ್, ಇದು ಒಂದು ಸೂಕ್ಷ್ಮ ವಿಚಾರವಾಗಿದ್ದು, ಇದನ್ನು ಯಾರು ರಾಜಕೀಕರಣಗೊಳಿಸಬಾರದು. ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ತನಿಖೆ ಇನ್ನು ಮುಗಿದಿಲ್ಲ. ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಒಂದು ದಿನದಲ್ಲಿ ನಿರ್ಧಾರ ಮಾಡಲು ಆಗಲ್ಲ. ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಕಾಲೇಜಿನವರು ಪತ್ರಿಕಾಗೋಷ್ಠಿ ಮಾಡಿ ವಿಡಿಯೋ ಡಿಲೀಟ್ ಬಗ್ಗೆ ಹೇಳಿದ್ದಾರೆ. ಆಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವವರು ಕಾನೂನು ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಯಾರು ವದಂತಿಗಳನ್ನು ಹರಡಬಾರದು. ಯುವತಿಯರ ರಕ್ಷಣೆ ನಮಗೆ ಮುಖ್ಯ. ಯುವತಿಯರು ನಮ್ಮ ಕುಟುಂಬದವರು. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿರುವುದು ಮುಖ್ಯ. ನಾನು ಧಾರ್ಮಿಕ ಅಥವಾ ರಾಜಕೀಯ ಮಾಡಲು ಇಲ್ಲಿ ಬಂದಿಲ್ಲ, ಒಬ್ಬ ಪೋಷಕರಾಗಿ ಇದನ್ನು ಬಗೆಹರಿಸಬೇಕು. ರಾಜಕಾರಣಿಗಳು ರಾಜಕೀಯ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದುಮ ಮನವಿ ಮಾಡಿದ್ದಾರೆ.





