ಬಿಜೆಪಿಯವರು ಉಚಿತ ಬಸ್ಸಿನಲ್ಲಿ ಹೋಗುತ್ತಾರೆ, ಬಸ್ಸಿನಿಂದಿಳಿದು ಕಾಂಗ್ರೆಸ್ಸನ್ನು ದೂರುತ್ತಾರೆ: ರಮೇಶ್ ರೈ ಸಾಂತ್ಯ
ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ರಾಜ್ಯದ ಎಲ್ಲಾ ಜನತೆಗಗಿ ಐದು ಗ್ಯಾರಂಟಿಗಳನ್ನು ತಂದಿದೆ. ಇವುಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಶಕ್ತಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಉಚಿತವಾಗಿ ಸರಕಾರಿ ಬಸ್ಸಿನಲ್ಲಿ ತೆರಳುವ ಬಿಜೆಪಿಯವರು ಬಸ್ಸಿನಿಂದ ಇಳಿದು ಶಕ್ತಿ ಯೋಜನೆಯೇ ಸರಿಯಿಲ್ಲ ಇದರಿಂದ ಕೆಎಸ್‌ಆರ್‌ಟಿಸಿ ದಿವಾಳಿಯಾಗಲಿದೆ ಎಂದು ದೂಷಣೆ ಮಾಡುತ್ತಾರೆ, ದಿವಾಳಿಯಾಗುವ ಭಯ ಬಿಜೆಪಿಗರಿಗೆ ಇದ್ದಲ್ಲಿ ಟಿಕೆಟ್ ಪಡೆದು ಪ್ರಯಾಣಿಸಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಹೇಳಿದರು.

ಕಾವಿನಲ್ಲಿ ಸೇವಾ ಸಿಂಧು ನೋಂದಣಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಐದು ಗ್ಯಾರಂಟಿಗಳನ್ನು ಬಡವರಿಗಾಗಿ ಕಾಂಗ್ರೆಸ್ ಜಾರಿಗೆ ತಂದಿದೆ. ಇಷ್ಟವಿದ್ದವರು ಪಡೆದುಕೊಳ್ಳಬಹುದು ಬೇಡವಾದವರು ಬಿಡಬಹುದು. ಯೋಜನೆಯ ಹೆಸರಿನಲ್ಲಿ ಬಡವರನ್ನು ಹಿಯಾಳಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು, ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಸರಕಾರದ ಐದು ಗ್ಯಾರಂಟಿಯನ್ನು ಕರ್ನಾಟಕದ ಜನತೆ ಸ್ವಾಗತಿಸಿದ್ದಾರೆ. ಜನತೆಯ ಸ್ವಾಗತಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ, ಕಳೆದ ಐದು ವರ್ಷದಲ್ಲಿ ಭ್ರಷ್ಟ ಆಡಳಿತ ನಡೆಸಿದ ಬಿಜೆಪಿಗೆ ಈ ಬಾರಿ ಜನ ತಕ್ಕ ಪಾಠ ಕಲಿಸಿಯೂ ಅವರಿಗೆ ಬುದ್ದಿ ಬಂದಿಲ್ಲ ಎಂದು ಹೇಳಿದ ಅವರು ಗ್ಯಾರಂಟಿ ಯೋಜನೆ ಕಾಂಗ್ರೆಸ್ ಯೋಜನೆಯಾಗಿದೆ ನೀವು ಇಷ್ಟವಿದ್ದಲ್ಲಿ ಸ್ವೀಕರಿಸಿ ಇಲ್ಲವಾದಲ್ಲಿ ಮೌನವಾಗಿರಿ ಎಂದು ಬಿಜೆಪಿಗರಿಗೆ ಮಾತಿನ ಮೂಲಕ ತಿವಿದರು.