ಅಳಕೆಮಜಲು ಸರಕಾರಿ ಶಾಲೆಯಲ್ಲಿ 6 ನೇ ತರಗತಿ ಆರಂಭಿಸಲು
ಶಿಕ್ಷಣ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ
ಪುತ್ತೂರು: ಬಂಟ್ವಾಳ ತಾಲೂಕು ವ್ಯಾಪ್ತಿಗೊಳಪಟ್ಟ ಅಳಕೆಮಜಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಗತವರ್ಷದಲ್ಲಿ 6 ನೇ ತರಗತಿ ಪ್ರಾರಂಭ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಜೂ. 22ರಂದು ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.
ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಯು 1ನೇ ತರಗತಿಯಿಂದ 5ನೇ ತರಗತಿಯವರೆಗೆ ನಡೆಯುತ್ತಿದ್ದು, ಒಟ್ಟು 133 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ 6 ನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ಸುಮಾರು 3 ಕಿ.ಮೀ ದೂರವಿರುವ ಮಿತ್ತೂರು, ಕಬಕ, ಓಜಾಲ ಶಾಲೆಗಳಿಗೆ ಹೋಗಬೇಕಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಎಸ್.ಡಿ.ಎಂ.ಸಿ ಸಭೆಯಲ್ಲಿ ಚರ್ಚಿಸಿ 2023-24ನೇ ಸಾಲಿನಲ್ಲಿ 6 ನೇ ತರಗತಿಗೆ ಉನ್ನತೀಕರಿಸಲು ನಿರ್ಣಯ ಕೈಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ.
ಅದರಂತೆ ಮಾನ್ಯ ಉಪ ನಿರ್ದೇಶಕರು, ಮಂಗಳೂರು ಇವರು ಸದರಿ ಶಾಲೆಯನ್ನು 6ನೇ ತರಗತಿಗೆ ಉನ್ನತೀಕರಿಸಬಹುದೆಂದು ತಮ್ಮ ಅಭಿಪ್ರಾಯದೊಂದಿಗೆ ಅನುಮತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗತ ವರ್ಷದಿಂದಲೇ 6ನೇ ತರಗತಿ ಆರಂಭ ಮಾಡುವಂತೆ ಇಲಾಖೆಗೆ ಆದೇಶ ನೀಡುವಂತೆ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.