ಕರಾವಳಿ

ಮೇ 19: ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪಳ್ಳಿದರ್ಸ್ ಉದ್ಘಾಟನೆ




ಪುತ್ತೂರು: ಪವಿತ್ರ ಇಸ್ಲಾಮಿನ ಧಾರ್ಮಿಕ ಶಿಕ್ಷಣ ನೀಡುವ ಪರಂಪರಾಗತ ವಿದ್ಯಾಭ್ಯಾಸ ಪದ್ಧತಿಯಾದ ಪಳ್ಳಿ ದರ್ಸ್ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧೀನದ ಬಪ್ಪಳಿಗೆ ಮಸ್ಜಿದುನ್ನೂರು ಮೊಹಲ್ಲಾ ಸಮಿತಿ ಆಶ್ರಯದಲ್ಲಿ ಮೇ 19 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಉದ್ಘಾಟನೆಗೊಳ್ಳಲಿದೆ. 

ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ರವರು ದರ್ಸ್ ಸಂಪ್ರದಾಯದ ಪಾರಂಪರ್ಯ ಗ್ರಂಥಗಳ ಕರ್ಮ ಶಾಸ್ತ್ರದ ಅಧ್ಯಾಯದ ಭಾಗಗಳನ್ನು ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ಮೂಲಕ ದರ್ಸ್ ಗೆ ಚಾಲನೆ ನೀಡಲಿದ್ದಾರೆ. ದ.ಕ. ಜಿಲ್ಲೆಯ ವಿದ್ವಾಂಸರುಗಳಲ್ಲೋರ್ವರೂ ಹಿರಿಯ ಮುದರ್ರಿಸರೂ  ಇಸ್ಮಾಯಿಲ್ ಫೈಝಿ ಮುದರ್ರಿಸ್ ಸೂರಿಂಜೆಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ತೋಡಾರು ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ರಫೀಕ್ ಹುದವಿ ಕೋಲಾರ ಸೇರಿದಂತೆ ಹಲವು ಉಲಮಾ ಗಣ್ಯರು ಆಗಮಿಸಲಿದ್ದಾರೆ.


ಮರ್ಹೂಂ ಪುತ್ತೂರು ತಂಙಳ್ ಸ್ಮರಣಾರ್ಥ ಅಸ್ತಿತ್ವಕ್ಕೆ ಬಂದ ವಿದ್ಯಾ ಕೇಂದ್ರ:
ಪುತ್ತೂರಿನ ಜುಮಾ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಮುದರ್ರಿಸರಾಗಿ ಸೇವೆಗೈದು ಪುತ್ತೂರು ಹಾಗೂ ಆಸುಪಾಸಿನ ಮೊಹಲ್ಲಾಗಳಲ್ಲಿ ಧಾರ್ಮಿಕ ಚೈತನ್ಯಕ್ಕೆ ಕಾರಣಕರ್ತರೂ ಪ್ರೇರಕರೂ ಹಲವು ವಿದ್ವಾಂಸರನ್ನು ಸಮಾಜಕ್ಕೆ ಸಮರ್ಪಿಸಿದ ಮರ್ಹೂಂ ಅಸ್ಸಯ್ಯಿದ್ ಹಾದಿಯಿಲ್ ಖಾದಿರಿಯ್ಯಿ ಕೆ. ಪಿ ಮುಹಮ್ಮದ್ ತಂಙಳ್ ಸ್ಮರಣಾರ್ಥ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದೆ.1963 ರಲ್ಲಿ ಬಪ್ಪಳಿಗೆಯಲ್ಲಿ ಸ್ಥಾಪನೆಗೊಂಡ ಮದರಸವನ್ನು ಮರ್ಹೂಂ ತಂಙಳರವರೇ ಉಧ್ಘಾಟಿಸಿ ‘ನೂರುಲ್ ಹುದಾ’ಎಂದು ನಾಮಕರಣವನ್ನು ಮಾಡಿದ್ದು, ಅದೇ ನಾಮವನ್ನು ತಂಙಳರ ಸ್ಮರಣಾರ್ಥ ಪ್ರಾರಂಭಿಸಿದ ದರ್ಸಿಗೂ ಕೂಡ ‘ನೂರುಲ್ ಹುದಾ ಪಳ್ಳಿ ದರ್ಸ್’ ಎಂದು ನಾಮಕರಣ ಮಾಡಲಾಗಿದೆ.


ಏನಿದು ಪಳ್ಳಿ ದರ್ಸ್: ಪ್ರವಾದಿ(ಸ) ರ ಕಾಲದಲ್ಲಿ ಮದೀನಾ ಮಸೀದಿಯಲ್ಲಿ ಪ್ರಾರಂಭಿಸಿದ ಧಾರ್ಮಿಕ ಶಿಕ್ಷಣ ಕ್ರಮವಾಗಿದ್ದು ಮಸೀದಿಯಲ್ಲಿರುವ ಮುದರ್ರಿಸ್ ಗಳ ಅದೀನದಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣ ಪಡೆಯುತ್ತಾರೆ. ಏಳೆಂಟು ವರ್ಷಗಳ ಕಾಲ ದರ್ಸ್ ವಿದ್ಯಾಭ್ಯಾಸ ಪಡೆದು ಬಳಿಕ ಉನ್ನತ ಧಾರ್ಮಿಕ ಕಾಲೇಜುಗಳಿಗೆ ತೆರಳಿ ಪದವಿ ಪಡೆದು ಧಾರ್ಮಿಕ ನೇತೃತ್ವವನ್ನು ನೀಡುತ್ತಾರೆ.


ದರ್ಸ್ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣ:
ದರ್ಸಿಗೆ ದಾಖಲಾದ ವಿದ್ಯಾರ್ಥಿಗಳು ಅವರ ಅರ್ಹತೆಯಂತೆ ಲೌಕಿಕ ಶಿಕ್ಷಣಕ್ಕಾಗಿ ಶಾಲಾ-ಕಾಲೇಜುಗಳಿಗೆ ತೆರಳಿ ವ್ಯಾಸಂಗ ಮಾಡಿ ಬಳಿಕ ಮಸೀದಿಯಲ್ಲಿ ವಾಸ್ತವ್ಯ ಹೂಡುತ್ತಾರೆ.ಅವರಿಗೆ ದೈನಂದಿನ ಆರಾಧನಾ ಕರ್ಮಗಳಿಗೆ ನಿರಂತರ ತರಬೇತಿಯನ್ನು ನೀಡಲಾಗುತ್ತದೆ.
ಮೊಹಲ್ಲಾ ನಿವಾಸಿಗಳ ಮನೆಯಲ್ಲೇ ಊಟ: ಮಸೀದಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನೊ ದಗಿಸಲಾಗುತ್ತದೆ. ದಿನದ ಮೂರು ಹೊತ್ತು ಊಟಕ್ಕೆ ಮೊಹಲ್ಲಾ ಸದಸ್ಯರ ಮನೆಗೆ ತೆರಳುತ್ತಾರೆ.


ಮುದರ್ರಿಸರಾಗಿ ಯುವ ವಿದ್ವಾಂಸ ಶಫೀಕ್ ಫೈಝಿ ಅಲ್ ಮಅಬರಿ ನೇಮಕ:
ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ನಿರ್ದೇಶಕರಾಗಿಯೂ ಸ್ಥಳೀಯ ಖತೀಬರಾದ ಸಿರಾಜುದ್ದೀನ್ ಫೈಝಿ ವ್ಯವಸ್ಥಾಪಕರಾಗಿರುವ ಈ
ದರ್ಸಿನ ಮುದರ್ರಿಸರಾಗಿ ಯುವ ವಿದ್ವಾಂಸ ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನಿಂದ ಮಹ್ ಬರಿ ಬಿರುದು ಪಡೆದು , ಪ್ರತಿಷ್ಠಿತ ಪಟ್ಟಿಕ್ಕಾಡು ಜಾಮಿಯಾ ನೂರಿಯ ಅರಬಿಕ್ ಕಾಲೇಜಿನಿಂದ ರಾಂಕ್ ವಿಜೇತರಾಗಿ ಫೈಝಿ ಬಿರುದನ್ನೂ ಇಗ್ನೋ ವಿಶ್ವವಿದ್ಯಾಲಯದಿಂದ ಇಂಗ್ಲೀಷಿನಲ್ಲಿ ಎಂ. ಎ. ಪದವೀಧರರಾದ ಯುವ ವಿದ್ವಾಂಸ ಶಫೀಕ್ ಫೈಝಿ ಅಲ್ ಮಅಬರಿ ಮುದರ್ರಿಸರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಉದ್ಘಾಟನಾ ದಿನ ಆದಿತ್ಯವಾರ ಸಾಯಂಕಾಲ 5:00 ಗಂಟೆಗೆ ಮರ್ಹೂಂ ಪುತ್ತೂರು ತಂಙಳ್ ಮಕ್ಬರ ಝಿಯಾರತ್ ನಡೆಯಲಿದೆ.
ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧ್ಯಕ್ಷರಾದ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಲಿದ್ದು,
ಕಾರ್ಯಕ್ರಮದಲ್ಲಿ ಉಮರಾ ಪ್ರಮುಖರಾದ ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬಪ್ಪಳಿಗೆ ಮೊಹಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಲವ್ಲಿ ಹಾಗೂ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಅಧ್ಯಕ್ಷರಾದ ಮೋನು ಬಪ್ಪಳಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!