ಸರಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯ ‘ಶಕ್ತಿ ಯೋಜನೆ’ ಚಾಲನೆಗೆ ಸುಳ್ಯ ಶಾಸಕಿ ಗೈರು- ತಹಶೀಲ್ದಾರರಿಂದ ಕಾರ್ಯಕ್ರಮಕ್ಕೆ ಚಾಲನೆ
ರಾಜ್ಯ ಸರಕಾರದ ಮಹಿಳಾ ಶಕ್ತಿ ಯೋಜನೆ ಚಾಲನೆ ಸಮಾರಂಭಕ್ಕೆ ಸುಳ್ಯದ ಮಹಿಳಾ ಶಾಸಕಿ ಭಾಗೀರಥಿ ಮುರುಳ್ಯ ಗೈರು ಹಾಜರಾಗಿದ್ದರು. ಹಾಗಾಗಿ ತಹಶೀಲ್ದಾರ್ ಜಿ. ಮಂಜುನಾಥ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೇ ತಮ್ಮ ಭಾಷಣದಲ್ಲಿ ಮುಖ್ಯ ವಿಷಯವಾಗಿ ಸೇರಿಸಿ ಮಾತನಾಡಿದ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡರು “ಇಂದು ಈ ಒಂದು ಉತ್ತಮ ಕಾರ್ಯಕ್ರಮಕ್ಕೆ ನಮ್ಮ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಬೇಕಾಗಿತ್ತು. ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ತಂದಿರುವಂತಹ ಈ ಉತ್ತಮ ಯೋಜನೆಯನ್ನು ಅವರು ಬಂದು ಉದ್ಘಾಟಿಸುತ್ತಾರೆ ಎಂದು ನಾವು ವಿಶ್ವಾಸದಲ್ಲಿ ಇದ್ದೇವು. ಆ ರೀತಿಯಾಗಿ ಅವರು ಬಂದಿದ್ದರೆ ನಾನು ಸ್ವತಹ ಅವರಿಗೆ ಹೂ ಗುಚ್ಛ ನೀಡಿ ಕಾರ್ಯಕ್ರಮಕ್ಕೆ ಸ್ವಾಗತ ಮಾಡಲು ಬಯಸಿದ್ದೆ. ಹಿಂದಿನ ಶಾಸಕರು ಅಂಗಾರರಾಗಿದ್ದರೆ ಖಂಡಿತ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಅವರೇ ಮುಂಚೂಣಿಯಲ್ಲಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.ಸರಕಾರದ ಮುಂದಿನ ಗ್ಯಾರಂಟಿ ಚಾಲನೆ ಸಂದರ್ಭದಲ್ಲಾದರೂ ಅವರು ಬಂದು ಸಹಕಾರ ನೀಡಲಿ ಎಂದು ಹೇಳಿದರು.