ಕರಾವಳಿ

ನೀರಿಲ್ಲದೇ ಸಮಸ್ಯೆಗೆ ಸಿಲುಕಿದ ಮನೆಗಳಿಗೆ ಸ್ವಂತ ಬೋರ್’ವೆಲ್ ನಿಂದ ನೀರು ಪೂರೈಕೆ: ಜಾತಿ, ಧರ್ಮ ನೋಡದೇ ಮಾನವೀಯತೆ ಮೆರೆದ ಅಶ್ರಫ್ ಸಾರೆಪುಣಿ



ಪುತ್ತೂರು: ಕೆದಂಬಾಡಿ ಗ್ರಾ.ಪಂ ವ್ಯಾಪ್ತಿಯ ಸಾರೆಪುಣಿ ಪರಿಸರದಲ್ಲಿ ಕೆಲವು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿ ಸ್ಥಳೀಯರು ಪರದಾಟ ನಡೆಸುತ್ತಿದ್ದಾರೆ.
ಈತನ್ಮಧ್ಯೆ ಸ್ಥಳೀಯ ನಿವಾಸಿ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ಎಂಬವರು ತಮ್ಮ ಸ್ವಂತ ಕೊಳವೆ ಬಾವಿಯಿಂದ ತನ್ನ ಮನೆಯ ಆಸುಪಾಸಿನ ಆರು ಮನೆಗಳಿಗೆ ನೀರು ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗ್ರಾ.ಪಂ ಕುಡಿಯುವ ನೀರಿನ ಬೋರ್‌ವೆಲ್‌ನಲ್ಲಿ ನೀರು ಬತ್ತಿ ಹೋದ ಪರಿಣಾಮ ಸ್ಥಳಿಯ ಪರಿಸರದ ಮನೆಯವರು ಸಮಸ್ಯೆಗೆ ಸಿಲುಕಿದ್ದಾರೆ. ತನ್ನ ಮನೆಯ ಸಮೀಪದ ಆರು ಮನೆಯವರಿಗೆ ಜಾತಿ, ಮತ, ಧರ್ಮ ನೀಡದೇ ನೀರು ಒದಗಿಸಿ ಕೊಟ್ಟಿರುವ ಅಶ್ರಫ್ ಸಾರೆಪುಣಿ ಅವರ ನಡೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆಯಾದವರಿಗೆ ನಮ್ಮ ಸ್ವಂತ ಬೋರ್‌ವೆಲ್‌ನಿಂದ ನೀರು ಕೊಡುತ್ತಿದ್ದೇವೆ. ಗ್ರಾ.ಪಂ ನೀರು ಯಾವಾಗ ಬರುತ್ತದೋ ಅಲ್ಲಿಯ ವರೆಗೂ ನಾವು ನೀರು ಕೊಡುತ್ತೇವೆ ಎಂದು ಅಶ್ರಫ್ ಸಾರೆಪುಣಿ ಹೇಳಿದ್ದು ನೀರಿಲ್ಲದವರಿಗೆ ಬೋರ್‌ವೆಲ್ ಇದ್ದವರು ನೀರು ನೀಡಲು ಎಲ್ಲಿಯೂ ಹಿಂಜರಿಯಬಾರದು ಎಂದು ಹೇಳಿದ್ದಾರೆ.

ಸಾಮಾಜಿ ಕಾರ್ಯಕರ್ತರಾಗಿರುವ ಅಶ್ರಫ್ ಸಾರೆಪುಣಿ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ಸಾರೆಪುಣಿ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಕಾಂಗ್ರೆಸ್ ಕೆದಂಬಾಡಿ ವಲಯ ಕಾರ್ಯದರ್ಶಿ ಹಾಗೂ ಇನ್ನಿತರ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ಥಳೀಯವಾಗಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿರುವ ಅಶ್ರಫ್ ಸಾರೆಪುಣಿ ಅವರು ಆಪತ್ಬಾಂಧವರಾಗಿ ಅನೇಕ ಬಾರಿ ಸುದ್ದಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!