ಕರಾವಳಿರಾಜಕೀಯ

ಪ್ರಮಾಣ ವಚನ ಸ್ವೀಕಾರ: ಸುಳ್ಯದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಸಂಭ್ರಮಾಚರಣೆ

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಪ್ರಯುಕ್ತ ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ಯೂತ್ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಎಲ್ ಸಿ ಡಿ ಪರದೆ ಅಳವಡಿಸಿ ಪ್ರಮಾಣವಚನದ ನೇರ ಪ್ರಸಾರವನ್ನು ಸಾರ್ವಜನಿಕರಿಗೆ ನೋಡಲು ಅವಕಾಶವನ್ನು ಕಲ್ಪಿಸಲಾಗಿತ್ತು. ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಯನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಉಪಾಧ್ಯಕ್ಷ ಎನ್
ಜಯಪ್ರಕಾಶ್ ರೈ ‘ರಾಜ್ಯದ ಜನತೆ ಆಶೀರ್ವಾದ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ ಬಿಜೆಪಿಗರಿಗೆ ಬೇಕಾಗಿದ್ದ ಆಪರೇಷನ್ ಕಮಲ ಆಸೆಗೆ ತಣ್ಣೀರು ಎರಚಿದ್ದಾರೆ. ಅಲ್ಲದೆ ಜೆಡಿಎಸ್ ಪಕ್ಷದ ಕುಮಾರಸ್ವಾಮಿಯವರು ಕಾಯುತ್ತಿದ್ದ ಸಮ್ಮಿಶ್ರ ಸರ್ಕಾರ ರಚನೆಗೂ ಅವಕಾಶವನ್ನು ನೀಡದಂತೆ ಮತದಾರರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಸರಕಾರ ಜನಪರ ಹಾಗೂ ಸ್ವಚ್ಛ ಆಡಳಿತವನ್ನು ನೀಡಲಿದೆ ಎಂದು ಹೇಳಿದರು. ಸರಕಾರದಿಂದ ಜನರಿಗೆ ದೊರಕುವ ಎಲ್ಲಾ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಅವರು ಹೇಳಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡ ಮಾತನಾಡಿ ‘ಕರ್ನಾಟಕದ ಜನತೆ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು ಮೋದಿ ಅವರಿಗೆ ಕರ್ನಾಟಕದಲ್ಲಿ ಸೋಲು ಕಾಣುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿ ಪ್ರಾಕೃತಿಕ ವಿಕೋಪಗಳು, ಜನತೆಗೆ ಸಂಕಷ್ಟಗಳು ಎದುರಾದಾಗ ಬಾರದ ಪ್ರಧಾನ ಮಂತ್ರಿ ಮೋದಿಯವರು ಚುನಾವಣೆಯ ಸಂದರ್ಭವಾದ ಕಾರಣ ಕರ್ನಾಟಕದಲ್ಲಿ ಪ್ರಚಾರಕ್ಕಾಗಿ ಬೀಡು ಬಿಟ್ಟಿದ್ದರು. ಇದು ಯಾವುದು ಕೂಡ ಈ ಬಾರಿ ಚುನಾವಣೆಯಲ್ಲಿ ಫಲಿಸಲಿಲ್ಲ. ಬಿಜೆಪಿಯವರ ದ್ವೇಷದ ರಾಜಕಾರಣಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ.
ಚುನಾವಣೆಯ ಬಳಿಕ ಪುತ್ತೂರಿನಲ್ಲಿ ನಡೆದಿರುವಂತಹ ಘಟನೆಯನ್ನು ಡಾ.ಕಲ್ಲಡ್ಕ ಪ್ರಭಾಕರ್ ಭಟ್ಟರವರು ಕಾಂಗ್ರೆಸ್ ಪಕ್ಷದ ಮೇಲೆ ಆರೋಪವನ್ನು ಮಾಡುವ ಎಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ಅವರ ಮಾತಿನ ಕುತಂತ್ರವನ್ನು ಜನರು ಬಲ್ಲವರಾಗಿದ್ದು ಈ ರೀತಿಯ ಬಾಲಿಷ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕೆಲಸ ಕಾರ್ಯಗಳಿಗೆ ಇವರು ಎತ್ತಿದ ಕೈಗಳಾಗಿದ್ದಾರೆ. ಆದ್ದರಿಂದ ಈ ಬಾರಿ ಜನತೆ ಇವರಿಗೆ ಬುದ್ಧಿ ಕಲಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಗೋಕುಲ್‌ದಾಸ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮುಖಂಡರುಗಳಾದ ಭವಾನಿಶಂಕರ‌ ಕಲ್ಮಡ್ಕ, ಧರ್ಮಪಾಲ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ, ಬಾಲಕೃಷ್ಣ ಭಟ್, ಬೆಟ್ಟ ರಾಜಾರಾಮ್ ಭಟ್, ಬೆಟ್ಟ ಜಯರಾಮ ಭಟ್, ಸತ್ಯಕುಮಾರ್ ಆಡಿಂಜ, ಸಚಿನ್ ರಾಜ್ ಶೆಟ್ಟಿ,ಚೇತನ್ ಕಜೆಗದ್ದೆ, ನಂದರಾಜ ಸಂಕೇಶ, ಮುತ್ತಪ್ಪ ಪೂಜಾರಿ, ನೌಶಾದ್ ಕೆರೆಮೂಲೆ, ಇಬ್ರಾಹಿಂ ಶಿಲ್ಪ, ಬಾಪೂಸಾಹೇಬ್, ರಾಜು ಪಂಡಿತ್, ಶ್ರೀಹರಿ ಕುಕ್ಕುಡೇಲು, ತಿರ್ಥರಾಮ ಜಾಲ್ಸೂರು, ಲೋಕೇಶ್ ಅಕ್ರಿಕಟ್ಟೆ, ಶಹೀದ್ ಪಾರೆ, ಮಹಮ್ಮದ್ ಮುಟ್ಟತ್ತೋಡಿ, ಶರೀಫ್ ಜಯನಗರ,ಜಂಶೀರ್ ಶಾಲೆಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು.
ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!