ಉಳ್ಳಾಲ: ಸೋಮೇಶ್ವರ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ, ನಾಲ್ವರ ಬಂಧನ
ಉಳ್ಳಾಲ ಸೋಮೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆ ಬಂದವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೋಮೇಶ್ವರ ಸಮುದ್ರ ತೀರಕ್ಕೆ ಜೂ.1ರಂದು ಸಂಜೆ ಬಂದಿದ್ದರು. ಅವರಲ್ಲಿ ಮೂವರು ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಅವರನ್ನು ಹಿಂಬಾಲಿಸಿತ್ತು. ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದ ಕಾರಣಕ್ಕೆ ಈ ತಂಡವು ಯುವಕರ ಮೇಲೆ ಹಲ್ಲೆ ನಡೆಸಿತ್ತು. ಕೇರಳ ಚೆರ್ಕಳದ ಜಾಫರ್ ಶರೀಫ್ ಹಾಗೂ ಮಂಜೇಶ್ವರದ ಮುಜೀಬ್ ಮತ್ತು ಆಶಿಕ್ ಹಲ್ಲೆಗೊಳಗಾದವರು.
ಪ್ರಕರಣದ ವಿಚಾರಣೆಗಾಗಿ ಎರಡು ವಿಶೇಷ ತಂಡವನ್ನು ರಚಿಸಿರುವುದಾಗಿ ನಗರ ಪೊಲೀಸ್ ಕಮಿಷನರ್ ತಿಳಿಸಿದ್ದರು.
ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್,ಉಚ್ಚಿಲ ನಿವಾಸಿ ಸಚಿನ್ , ತಲಪಾಡಿ ನಿವಾಸಿ ಮೋಕ್ಷಿತ್, ಸುಹಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮತೀಯ ಗೂಂಡಾಗಿರಿ ಬಗ್ಗೆ ಜನತೆ ಆಕ್ರೋಶ ಹೊರ ಹಾಕಿದ್ದು ಇಂತಹ ಗೂಂಡಾಗಿರಿಗೆ ಕೊನೆ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಸರಕಾರ ಬದಲಾದರು ಇಂತಹ ಘಟನೆಗಳು ಮರುಕಳಿಸುತ್ತದೆ ಎಂದಾದರೆ ಇದಕ್ಕೆ ಅರ್ಥವೇನು ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.