ಪುತ್ತೂರು ಶಾಸಕ ಅಶೋಕ್ ರೈಯವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
ಪುತ್ತೂರು: ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಪುತ್ತೂರಿನ ತನ್ನ ಕಚೇರಿಯಲ್ಲಿ ಶಾಸಕರಾದ ಅಶೋಕ್‌ಕುಮಾರ್ ರೈಯವರು ಸಾರ್ವಜನಿಕರಿಂದ ಮೇ.29 ರಂದು ಅಹವಾಲು ಸ್ವೀಕರಿಸಿದರು.

ಶಾಸಕರು ಅಪರಾಹ್ನ ಕಚೇರಿಗೆ ಬರುತ್ತಾರೆಂದು ತಿಳಿದು ಮಧ್ಯಾಹ್ನದ ಬಳಿಕ ಕಚೇರಿಯಲ್ಲಿ ನೂರಾರು ಸಂಖ್ಯೆಯ ಸಾರ್ವಜನಿಕರು ನೆರೆದಿದ್ದರು. ಮಂಗಳೂರಿನಲ್ಲಿ ಸ್ಪೀಕರ್ ಯು ಟಿ ಖಾದರ್ ಜೊತೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಸಂಜೆ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದರು.
ಬಹುತೇಕ ಗ್ರಾಮೀಣ ಭಾಗದಿಂದ ಆಗಮಿಸಿದ ಸಾರ್ವಜನಿಕರು ಸಮಸ್ಯೆಗಳ ಅರ್ಜಿಯ ಜೊತೆಗೆ ಬಂದಿದ್ದರು. ಸಣ್ಣ ಪುಟ್ಟ ಸಮಸ್ಯೆಗಳಿಗೆ ಶಾಸಕರು ಅಧಿಕಾರಿಗಳಿಗೆ ಕಚೇರಿಯಿಂದಲೇ ಕರೆ ಮಾಡಿ ಇತ್ಯರ್ಥ ಮಾಡಿದರು. ಮನೆ ಇಲ್ಲದವರು, ಅನಾರೋಗ್ಯ ಪೀಡಿತರು, ವಿದ್ಯುತ್ ಸಂಪರ್ಕ, 94 ಸಿ, 94 ಸಿ ಸಿ, ನಿರುದ್ಯೋಗಿಗಳು, ಮನೆ ದುರಸ್ತಿ, ಕಲಿಕೆಗೆ ನೆರವು ಸೇರಿದಂತೆ ಅನೇಕ ಮಂದಿ ತಮ್ಮ ಅಹವಾಲನ್ನು ಶಾಸಕರ ಮುಂದೆ ಹೇಳಿಕೊಂಡರು.
ವೃದ್ದರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಮೊದಲ ಸಾರ್ವಜನಿಕ ಭೇಟಿಯಾದ ಕಾರಣ ನೂರಕ್ಕಿಂತಲೂ ಹೆಚ್ಚು ಮಂದಿ ಆಗಮಿಸಿದ್ದರು.
ಶಾಸಕರನ್ನು ಭೇಟಿಯಾಗಲು ಬಂದಿರುವ ಜನ ಸಾಮಾನ್ಯರಿಗೆ ಮೊದಲ ಆಧ್ಯತೆ ನೀಡಲಾಗಿತ್ತು, ಗ್ರಾಮೀಣ ಭಾಗದಿಂದ ಬಂದಿರುವ ಮಂದಿಯನ್ನು ಮೊದಲ ಸಾಲಿನಲ್ಲೆ ಮನವಿ ಸ್ವೀಕರಿಸಿದರು.





