ಕಾಂಗ್ರೆಸ್ ಗ್ಯಾರಂಟಿ…ಭವಿಷ್ಯದ ಸವಾಲುಗಳು ✒️ ಸಂಪಾದಕೀಯ
ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳು ಮುಖ್ಯವಾಗಿ ಕಾಂಗ್ರೆಸ್ ಕೈ ಹಿಡಿದಿದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬಂದಿದೆ. ಉತ್ತರ ಕರ್ನಾಟಕದಲ್ಲಂತೂ ಗ್ಯಾರಂಟಿ ಯೋಜನೆ ಸಂಪೂರ್ಣ ವರ್ಕ್‌ಔಟ್ ಆಗಿದೆ ಎನ್ನುವುದು ಕೂಡಾ ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ಸರಕಾರಕ್ಕೆ 40% ಭ್ರಷ್ಟಾಚಾರದ ಆರೋಪದ ಜೊತೆ ಅನೇಕ ಹಗರಣಗಳ ಆರೋಪವೇ ಮುಖ್ಯವಾಗಿ ಮುಳುವಾಗಿದೆ. ಧರ್ಮ, ಜಾತಿ ರಾಜಕೀಯವೂ ಈ ಬಾರಿ ಬಿಜೆಪಿಗೆ ಮುಳುವಾಗಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿದೆ. ಬಿಜೆಪಿ ಆಡಳಿತದಿಂದ ಬೇಸತ್ತ ಜನತೆ ಬದಲಾವಣೆಗಾಗಿ ಮತ ಚಲಾಯಿಸಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ಹಿಂದೆಂದಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಪಡೆದು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

ಇನ್ನು ಚುನಾವಣೆಗೆ ಮೊದಲು ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆಯುವುದು ಕಾಂಗ್ರೆಸ್‌ಗಿರುವ ಮುಖ್ಯ ಜವಾಬ್ದಾರಿಯಾಗಿದೆ.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಜೂನ್ ತಿಂಗಳಿನಿಂದ ಕರೆಂಟ್ ಬಿಲ್ ಯಾರೂ ಕಟ್ಟಬೇಡಿ ಎಂದೂ ಹೇಳಿದ್ದರು. ‘ನನಗೂ ಫ್ರೀ, ನಿನಗೂ ಫ್ರೀ’ ಎಂದು ಹೇಳಿಕೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು 2 ವಾರ ಕಳೆದರೂ ಗ್ಯಾರಂಟಿ ಯೋಜನೆ ಜಾರಿಯಾಗಿಲ್ಲ. ಗ್ಯಾರಂಟಿ ಯೋಜನೆ ಜಾರಿಯಾಗದ ಕುರಿತು ಬಿಜೆಪಿ ಸಹಜವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ ಟೀಕೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಹೇಳಿಕೆಯನ್ನು ಅಧಿಕಾರಕ್ಕೆ ಬಂದ ತಕ್ಷಣ ಮಾಡದೇ ಇರುವುದು ಜನರ ಅಸಮಾದಾನಕ್ಕೂ ಕಾರಣವಾಗಿದೆ.
ಈ ಹಿಂದೆ ಹಲವು ‘ಭಾಗ್ಯ’ಗಳನ್ನು ಕರುಣಿಸಿದ್ದ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವವರು ಆದ ಕಾರಣ ಕಾಂಗ್ರೆಸ್ ನೀಡಿರುವ ಎಲ್ಲ ಗ್ಯಾರಂಟಿಗಳನ್ನು ಜನರು ಒಪ್ಪಿಕೊಂಡಿದ್ದರು. ಮತ್ತು ಅದಕ್ಕಾಗಿಯೇ ಮತವನ್ನೂ ಚಲಾಯಿಸಿದ್ದರು ಎನ್ನುವುದು ಎಲ್ಲೆಡೆ ಕೇಳಿ ಬರುವ ಮಾತು. ಅದೇ ಸಿದ್ದರಾಮಯ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎನ್ನುವ ನಂಬಿಕೆ ಮತ್ತು ವಿಶ್ವಾಸ ಜನರಿಗಿದೆ. ಆದರೆ ವಿಳಂಬ ನೀತಿ ಅನುಸರಿಸುತ್ತಿರುವುದು ಮಾತ್ರ ಇಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗುತ್ತಿದೆ.
200 ಯುನಿಟ್ ಉಚಿತ ವಿದ್ಯುತ್ ಹಾಗೂ ಮನೆಯ ಯಜಮಾನಿಗೆ ರೂ.2000 ಈ ಎರಡು ಯೋಜನೆಯನ್ನಾದರೂ ಸರಕಾರ ಕೂಡಲೇ ಘೋಷಿಸಿ ಅನುಷ್ಠಾನಗೊಳಿಸಿದ್ದರೆ ಇತರ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆ ಮತ್ತು ಗೊಂದಲ ಆಗುತ್ತಿರಲಿಲ್ಲ. ಐದೂ ಯೋಜನೆಗಳನ್ನು ಅನುಷ್ಠಾನಕ್ಕೆ ಸಮಯಾವಕಾಶ ತೆಗೆದುಕೊಳ್ಳುತ್ತಿರುವುದು (ಗ್ಯಾರಂಟಿ ಯೋಜನೆಗೆ ಕಾಯುತ್ತಿರುವ ಫಲಾನುಭವಿಗಳಿಗೆ) ಜನರಿಗೆ ನಿರಾಸೆಯಾಗುತ್ತಿದೆ.
ಏನೇ ಆದರೂ ಗ್ಯಾರಂಟಿ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸಲೇಬೇಕಾಗಿದೆ. ಅದಕ್ಕೆ ಅನೇಕ ಷರತ್ತು, ನಿಯಮಗಳನ್ನು ವಿಧಿಸಿದರೂ ಅದು ಸರಕಾರಕ್ಕೆ ಉಲ್ಟಾ ಆಗುವ ಸಾಧ್ಯತೆಗಳೇ ಹೆಚ್ಚು. ವೇಗವಾಗಿ ಮತ್ತು ಸರಳವಾಗಿ ಗ್ಯಾರಂಟಿ ಯೋಜನೆಯನ್ನು ಸರಕಾರ ಜಾರಿಗೊಳಿಸದಿದ್ದಲ್ಲಿ ಭವಿಷ್ಯದಲ್ಲಿ ಹಲವು ಸವಾಲುಗಳನ್ನು ಸರಕಾರ ಎದುರಿಸಬೇಕಾಗಿ ಬರಬಹುದು
ನೀಡಿರುವ ಭರವಸೆಗಳನ್ನು ಸರಿಯಾದ ರೀತಿಯಲ್ಲಿ ನೀಡದೇ ಕಠಿಣ ಷರತ್ತುಗಳನ್ನು ವಿಧಿಸಿದ್ದೇ ಆದಲ್ಲಿ ಇಂದು ಗೆಲ್ಲಿಸಿದ ಅದೇ ಜನತೆ ನಾಳೆ ಸೋಲಿಸಲೂ ಸಿದ್ದರಾಗುತ್ತಾರೆ ಎನ್ನುವ ಸತ್ಯ ಕಾಂಗ್ರೆಸ್‌ಗೂ ಗೊತ್ತಿರಬೇಕು. ಕೇಂದ್ರದ 15 ಲಕ್ಷ ರೂ ಎಲ್ಲಿ ಎಂದು ಈಗಲೂ ಜನ ಮಾತನಾಡುವ ಹಾಗೆ ಕಾಂಗ್ರೆಸ್‌ನ ಭರವಸೆಯನ್ನೂ ಜನತೆ ಪ್ರಶ್ನಿಸುವಂತಾಗಬಹುದು.
ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ನಾವು ನುಡಿದಂತೆ ನಡೆದಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದರೆ ಕಾಂಗ್ರೆಸ್ ಸರಕಾರದ ಮೇಲೆ ಜನರಿಗೆ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ. ಸರಳ ಮತ್ತು ಸ್ಪಷ್ಟತೆಯ ಗ್ಯಾರಂಟಿಯೊಂದೇ ಕಾಂಗ್ರೆಸ್‌ನ ವಿಶ್ವಾಸವನ್ನು ಇಮ್ಮಡಿಗೊಳಿಸಬಲ್ಲದು.