ಪುತ್ತಿಲ ವಿರುದ್ಧ ಮತ್ತೆ ವಾಗ್ದಾಳಿ: ಹಿಂದುತ್ವ VS ಹಿಂದುತ್ವ..! ಗೆಲ್ಲುವವರು ಯಾರು..? @
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಸ್ಪರ್ಧಿಸುತ್ತಿರುವುದು ಕ್ಷೇತ್ರದಲ್ಲಿ ಹೆಚ್ಚು ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಪ್ರಖರ ಹಿಂದುತ್ವವಾದಿಯಾಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದ್ದಾರೆ.
ಪುತ್ತಿಲರವರು ಪ್ರಾರಂಭದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆ ಎನ್ನಲಾಗಿತ್ತಾದರೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡದೇ ಅಚಲವಾಗಿ ಕಣದಲ್ಲಿ ಉಳಿಯುವ ಮೂಲಕ ಆಶ್ಚರ್ಯ ಮೂಡಿಸಿದ್ದರು.
ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಅಭ್ಯರ್ಥಿ ಒಂದೆಡೆಯಾದರೆ ಹಿಂದುತ್ವವನ್ನು ಪ್ರತಿಪಾದಿಸುವ ಅರುಣ್ ಕುಮಾರ್ ಪುತ್ತಿಲ ಇನ್ನೊಂದೆಡೆ. ಬಿಜೆಪಿ ಮತ್ತು ಪುತ್ತಿಲ ಈಗಲೂ ಪ್ರತಿಪಾದಿಸುತ್ತಿರುವುದು ಹಿಂದುತ್ವವನ್ನು. ಮತ ಬೇಟೆಯಲ್ಲಿ ಪ್ರಮುಖ ವಿಚಾರ ಕೂಡಾ ಹಿಂದುತ್ವವೇ. ಆದರೆ ಕ್ಷೇತ್ರದ ಜನತೆ ಈ ಬಾರಿ ಯಾರ ಹಿಂದುತ್ವಕ್ಕೆ ಹೆಚ್ಚು ಒಲವು ತೋರಿಸುತ್ತಾರೆ ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ.
ದಿನಗಳೆದಂತೆ ಪುತ್ತಿಲ ಬಳಗ ಪ್ರಬಲವಾಗುತ್ತಾ ಸಾಗುತ್ತಿದೆ. ಹೋದಲ್ಲೆಲ್ಲಾ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಸಭೆ ಸಮಾರಂಭ, ರೋಡ್ ಶೋಗಳಲ್ಲಿ ಜನಸ್ತೋಮವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಪುತ್ತಿಲರ ಅಬ್ಬರ ಜೋರಾಗಿದೆ. ಅರುಣ್ ಕುಮಾರ್ ಪುತ್ತಿಲರ ನಿರೀಕ್ಷೆಗೂ ಮೀರಿದ ಬೆಂಬಲ ಕ್ಷೇತ್ರದಲ್ಲಿ ಅವರಿಗೆ ಸಿಗುತ್ತಿದೆ. ಇದು ಮುಖ್ಯವಾಗಿ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದ್ದು ಪುತ್ತಿಲರನ್ನು ನಿಯಂತ್ರಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.
ಇದೀಗ ಪುತ್ತಿಲ ವಿರುದ್ಧ ಹಿಂದು ಸಂಘಟನೆಯ ನಾಯಕರಾದ ಡಾ.ಪ್ರಸಾದ್, ಡಾ ಕಲ್ಲಡ್ಕ ಭಟ್ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಆಕ್ರೋಶ ಹೊರ ಹಾಕಿದ್ದು ಪುತ್ತಿಲರ ಹಿಂದುತ್ವವನ್ನೇ ಪ್ರಶ್ನೆ ಮಾಡಿದ್ದಾರೆ. ಪುತ್ತಿಲರ ಮೇಲೆ ಒಂದಷ್ಟು ಆರೋಪಗಳ ಸುರಿಮಳೆಯನ್ನೂ ಸುರಿಸಿದ್ದಾರೆ. ಪುತ್ತಿಲರದ್ದು ನಕಲಿ ಹಿಂದುತ್ವ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ.
ಪುರುಷರಕಟ್ಟೆ ಸಮೀಪದ ಕೆರೆಮನೆಕಟ್ಟೆ ಎಂಬಲ್ಲಿ ನಡೆದ ಭಾರತ ಮಾತ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಅವರು ಪಕ್ಷೇತರನಾಗಿ ನಿಂತವರು ಸ್ವಂತ ಸಾಮರ್ಥ್ಯದಿಂದ ಮತ ಕೇಳಬೇಕು. ಮೋದಿಜಿ, ಯೋಗಿಜಿ ಹೆಸರು ಹೇಳಿಕೊಂಡು ಮತ ಕೇಳುವುದು ಬೇಡ ಎಂದು ಪರೋಕ್ಷವಾಗಿ ಪುತ್ತಿಲರಿಗೆ ಟಾಂಗ್ ನೀಡಿದ್ದಾರೆ. ತಾನು ಸ್ವತಂತ್ರ ಎಂದು ಹೇಳಿಕೊಂಡು ಏನು ಬೇಕಾದರೂ ಮಾಡಲು ಆಗುವುದಿಲ್ಲ, ಅವರಿಗೆ ಯಾವುದೇ ಚೌಕಟ್ಟು ಇರುವುದಿಲ್ಲ, ನಾವು ಅಂತವರಿಗೆ ಬೆಂಬಲ ಕೊಡಲು ಹೋದರೆ ದೇಶ ದ್ರೋಹದ ಕೆಲಸ ಆದೀತು, ಅದು ಹಿಂದುತ್ವಕ್ಕೆ ಹೊಡೆತ ನೀಡುವ ಕೆಲಸವಾದೀತು ಎಂದು ಪ್ರಭಾಕರ ಭಟ್ ಹೇಳಿದ್ದಾರೆ.
ಡಾ.ಎಂ.ಕೆ ಪ್ರಸಾದ್ ಮಾತನಾಡಿ ಹಿಂದೂ ನಾಯಕ ಆಗಬೇಕಾದರೆ ಎಂಎಲ್‌ಎ ಆಗಬೇಕಾ? ಡೋಂಗಿ ಹಿಂದುತ್ವದವರಿಗೆ ಅವಕಾಶ ಕೊಡಬೇಡಿ ಎಂದು ಹೇಳಿದರು. ದೇವಸ್ಥಾನದ ವೈದಿಕ ಕಾರ್ಯಕ್ರಮಕ್ಕೆ ಕೋರ್ಟಿನಿಂದ ತಡೆಯಾಜ್ಞೆ ತರುವುದು ಯಾವ ಹಿಂದುತ್ವ ಎಂದು ಪ್ರಶ್ನಿಸಿದ ಅವರು ಹುದ್ದೆಗೋಸ್ಕರ ಹಿಂದುತ್ವ ಮಾಡಬಾರದು ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹಿಂದುತ್ವದ ವಿರುದ್ಧ ಹಿಂದುತ್ವ ಎನ್ನುವಷ್ಟರ ಮಟ್ಟಿಗೆ ಇದು ಹೋಗಿದೆಯಾ ಎನ್ನುವ ಪ್ರಶ್ನೆ ಜನರನ್ನು ಕಾಡುವಂತಾಗಿದೆ. ವಿಶೇಷ ಎಂದರೆ ಹಿಂದು ಸಂಘಟನೆಗಳ ಮುಖಂಡರ ಟೀಕೆ, ಆರೋಪಗಳ ಬಳಿಕವೂ ಪುತ್ತಿಲರ ಜನ ಬೆಂಬಲ ಕಡಿಮೆಯಾಗಿಲ್ಲ ಎಂದು ಭಾಸವಾಗುತ್ತಿದೆ. ಅವರು ಹೋದ ಕಡೆ ಜನರು ಸೇರುತ್ತಿರುವುದನ್ನು ನೋಡಿದರೆ ನಿರ್ಣಾಯಕ ಮತಗಳನ್ನು ಪಡೆಯುತ್ತಾರೆ ಎನ್ನುವ ಲೆಕ್ಕಾಚಾರವೇ ಎಲ್ಲಾ ಕಡೆಗಳಲ್ಲೂ ಕೇಳಿ ಬರುತ್ತಿದೆ. ದಾಖಲೆಯ ಮತ ಪಡೆಯುವ ಅರುಣ್ ಕುಮಾರ್ ಪುತ್ತಿಲ ಈ ಬಾರಿ ಇತಿಹಾಸ ಸೃಷ್ಟಿಸುತ್ತಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಒಟ್ಟಾರೆಯಾಗಿ ಪುತ್ತಿಲರ ಹವಾ ಎಲ್ಲೆಡೆ ಜೋರಾಗಿ ಬೀಸುತ್ತಿದೆ. ಇದರಿಂದ ಕಾಂಗ್ರೆಸ್ ಲಾಭ ಗಳಿಸುತ್ತಾ, ಅಥವಾ ಪುತ್ತಿಲರೇ ಜಯಭೇರಿ ಬಾರಿಸುತ್ತಾರಾ ಅಥವಾ ಎಲ್ಲ ಅಡೆತಡೆಗಳನ್ನು ಮೀರಿ ಬಿಜೆಪಿ ವಿಜಯ ಪತಾಕೆ ಹಾರಿಸುತ್ತಾ ಕಾದು ನೋಡಬೇಕಿದೆ. ಕೊನೆಯದಾಗಿ ಗೆಲುವು ಯಾರದ್ದು ಎನ್ನುವುದು ಮಾತ್ರ ಮೇ.13ರಂದು ಗೊತ್ತಾಗಲಿದೆ.