ಕರಾವಳಿರಾಜಕೀಯರಾಜ್ಯ

ಪುತ್ತೂರು ವಿಧಾನಸಭಾ ಕ್ಷೇತ್ರ: ಜೆಡಿಎಸ್’ನಿಂದ ಮೀರಾ ಸಾಹೇಬ್ ಸ್ಪರ್ಧೆಗೆ ಹೈಕಮಾಂಡ್ ಒಲವು?



ಪುತ್ತೂರು: ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇದೀಗ ಪಕ್ಷದ ಹಿರಿಯ ನಾಯಕ ಸೈಯದ್ ಮೀರಾ ಸಾಹೇಬ್ ಹೆಸರು ಕೇಳಿ ಬಂದಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅಶ್ರಫ್ ಕಲ್ಲೇಗ ಹಾಗೂ ಐ.ಸಿ ಕೈಲಾಸ್ ಅವರ ಹೆಸರು ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬಂದಿತ್ತು. ಇದೀಗ ಅಶ್ರಫ್ ಕಲ್ಲೇಗ ಅವರಲ್ಲದೇ ಮೀರಾ ಸಾಹೇಬ್ ಮತ್ತು ಇನ್ನೋರ್ವ ಮಹಿಳೆಯ ಹೆಸರು ಹೈಕಮಾಂಡ್‌ಗೆ ರವಾನೆಯಾಗಿದೆ ಎನ್ನಲಾಗಿದ್ದು ಅದರಲ್ಲಿ ಪಕ್ಷದ ಹಿರಿಯ ನಾಯಕ ಹಾಗೂ ಜೆಡಿಎಸ್ ಕಡಬ ಕ್ಷೇತ್ರದ ಅಧ್ಯಕ್ಷ ಸೈಯದ್ ಮೀರಾ ಸಾಹೇಬ್ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಲವು ಹೊಂದಿದೆ ಎನ್ನಲಾಗಿದೆ.

ಮೀರಾ ಸಾಹೇಬ್ ಅವರು ಕಡಬ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ 2 ಅವಧಿಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದು 5 ವರ್ಷ ಪುತ್ತೂರು ತಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ದ.ಕ ಜಿಲ್ಲಾ ಪರಿಷತ್ ಸದಸ್ಯರಾಗಿ ಹಾಗೂ ಕಾಮಗಾರಿ ಸ್ಥಾಯೀ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ದ.ಕ ಜಿಲ್ಲಾ ವಕ್ಫ್ ಬೋರ್ಡ್‌ನಲ್ಲಿ 10 ವರ್ಷ ಸದಸ್ಯರಾಗಿದ್ದ ಇವರು ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿಯಾಗಿ, ಕಡಬ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ, ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಇನ್ನಿತರ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮೀರಾ ಸಾಹೇಬ್ ಅವರು ಶಾಲಾ ಕಾಲೇಜು ಸಮಿತಿಗಳಲ್ಲಿ ಪದಾಧಿಕಾರಿಯಾಗಿ, ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜನಪ್ರತಿನಿಧಿಯಾಗಿ ಉತ್ತಮ ಹೆಸರು ಪಡೆದಿರುವ ಇವರು ‘ಚೇರ್‌ಮೆನ್’ ಎಂದೇ ಎಲ್ಲೆಡೆ ಚಿರಪರಿಚಿತರಾಗಿದ್ದಾರೆ.


ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಡಬಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಮೀರಾ ಸಾಹೇಬರ ಪಾತ್ರ ಅಪಾರವಾದದ್ದು. ಕಡಬ ತಾಲೂಕು ರಚನೆಯಾಗುವಲ್ಲಿಯೂ ಇವರು ಅಪಾರ ಶ್ರಮ ಪಟ್ಟಿದ್ದರು. ಜೆಡಿಎಸ್ ರಾಜ್ಯ ಮಟ್ಟದ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಮೀರಾ ಸಾಹೇಬ್ ಅವರನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ನೀಡಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.

ಅಶ್ರಫ್ ಕಲ್ಲೇಗ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದು ಈ ಮಧ್ಯೆ ಮೀರಾ ಸಾಹೇಬ್ ಹೆಸರು ಮುನ್ನಲೆಗೆ ಬಂದಿರುವುದು ತೀವ್ರ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!